ಮಂಗಳೂರಿನಿಂದ ಹೋಗುತ್ತಿದ್ದ ಕಾರು ಹಾಸನದಲ್ಲಿ ಅಪಘಾತ- 6 ಮಂದಿ ಸಾವು, ಉತ್ತರಪ್ರದೇಶದಲ್ಲಿ 11 ಮಂದಿ ಸಾವು


ಹಾಸನ: ಮಂಗಳೂರಿನಿಂದ ಚಿಕಬಳ್ಳಾಪುರ ತೆರಳುತ್ತಿದ್ದ ಕಾರು ಹಾಸನ ಹೊರವಲಯದ  ಕಂದಲಿ ಸಮೀಪ ಇಂದು ಅಪಘಾತ ಸಂಭವಿಸಿ   ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.

ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್  ಹಾಗು ರಾಕೇಶ್  ಸಾವನ್ನಪ್ಪಿದವರು. 

ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಕೋಟೆ ತಾಲೂಕಿನವರಾದ ಇವರು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು  ಕಾರಿನಲ್ಲಿ ಹೋಗುತ್ತಿದ್ದರು.

ಮಂಗಳೂರಿನಿಂದ ಹಿಂದಿರುಗುತ್ತಿದ್ದಾಗ ಅಪಘಾತ ಘಟಿಸಿದೆ. ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿ ಕಂಟೇನರ್‌ಗೆ ಗುದ್ದಿದೆ. ನಜ್ಜುಗುಜ್ಜಾದ ಕಾರೊಳಗಿಂದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು.

ಸ್ಥಳಕ್ಕೆ ಹಾಸನ ಎಸ್ಪಿ ಮಹಮದ್ ಸುಚಿತಾ ಭೇಟಿ ನೀಡಿ ಪರಿಶೀಲಿಸಿದರು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉತ್ತರ ಪ್ರದೇಶ:   ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ಜಲ್ಲಿ ಕಲ್ಲು ತುಂಬಿದ್ದ ಲಾರಿ ರಭಸವಾಗಿ ಡಿಕ್ಕಿ ಹೊಡೆದು ಬಸ್​ ಮೇಲೆ ಪಲ್ಟಿಯಾದ ಪರಿಣಾಮ 11 ಮಂದಿ ದುರಂತ ಸಾವು ಕಂಡ ಘಟನೆ ನಡೆದಿದೆ. 

ಉತ್ತರಪ್ರದೇಶದಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಖಾಸಗಿ ಬಸ್​ನಲ್ಲಿ ಭಕ್ತರು ಸೀತಾಪುರದಿಂದ ಪೂರ್ಣಗಿರಿಗೆ ತೆರಳುತ್ತಿದ್ದರು. ಈ ವೇಳೆ ಊಟಕ್ಕೆಂದು ಡಾಬಾ ಬಳಿ ನಿಲ್ಲಿಸಿದ್ದಾಗ ಲಾರಿ ಡಿಕ್ಕಿ ಹೊಡೆದು, 11 ಮಂದಿಯನ್ನು ಬಲಿ ಪಡೆದಿದೆ. ಘಟನೆಯಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

 ಸೀತಾಪುರ ಜಿಲ್ಲೆಯ ಬರಜೆಥಾ ಗ್ರಾಮದ ನಿವಾಸಿಗಳು ಶನಿವಾರ ರಾತ್ರಿ ಪೂರ್ಣಗಿರಿ ಕ್ಷೇತ್ರಕ್ಕೆ ಖಾಸಗಿ ಬಸ್​ನಲ್ಲಿ ಹೋಗುತ್ತಿದ್ದರು. ಶಹಜಹಾನ್‌ಪುರದ ಗೋಲಾ ಬೈಪಾಸ್ ರಸ್ತೆಯ ಡಾಬಾದ ಬಳಿ ಊಟಕ್ಕೆಂದು ಬಸ್ ನಿಲ್ಲಿಸಲಾಗಿದೆ. ಕೆಲವರು ಬಸ್​ ಇಳಿದು ಡಾಬಾದೊಳಗೆ ಹೋಗಿದ್ದರು. ಇನ್ನು ಕೆಲವರು ಬಸ್​ನೊಳಗೆ ಕುಳಿತಿದ್ದರು.

ಈ ವೇಳೆ ಜಲ್ಲಿ ಕಲ್ಲು ತುಂಬಿದ್ದ ಲಾರಿಯೊಂದು ವೇಗವಾಗಿ ಬಂದು ನಿಂತಿಕೊಂಡಿದ್ದ ಬಸ್​​ಗೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್​ ಮೇಲೆಯೇ ಬಿದ್ದಿದೆ. ಇದರಿಂದ ಜಲ್ಲಿಕಲ್ಲಿನೊಳಗೆ ಜನರು ಹೂತು ಹೋಗಿದ್ದಾರೆ. 

ತಕ್ಷಣವೆ ಸ್ಥಳಕ್ಕೆ ಬಂದ ಪೊಲೀಸರು, ಕ್ರೇನ್​ ಮತ್ತು ಬುಲ್ಡೋಜರ್​ನಿಂದ ಪಲ್ಟಿಯಾದ ಲಾರಿಯನ್ನು ಬಸ್​ನಿಂದ ಬೇರ್ಪಡಿಸಿದ್ದಾರೆ. ಆದರೆ, ಜಲ್ಲಿ ಕಲ್ಲಿನ ರಾಶಿಯಲ್ಲಿ ಹೂತಿದ್ದ 11 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಮಾರು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ 10 ಮಂದಿಯನ್ನು ರಕ್ಷಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.