ಸಿಗರೇಟ್ ಸೇದುತ್ತಿದ್ದ ಮಹಿಳೆಯರನ್ನು ಗುರಾಯಿಸಿ ನೋಡುತ್ತಿದ್ದ ಯುವಕನಿಗೆ ಚೂರಿಯಿಂದ ಇರಿದು ಹತ್ಯೆ


ನಾಗ್ಪುರ: ಮಹಿಳೆಯರಿಬ್ಬರು ಸಿಗರೇಟ್ ಸೇದುತ್ತಿರುವುದನ್ನ ಗುರಾಯಿಸಿ ನೋಡಿದ್ದಾನೆಂದು 28 ವರ್ಷದ ಯುವಕನನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ನಾಗುರದಲ್ಲಿ ನಡೆದಿದೆ.

ಶನಿವಾರ ತಡರಾತ್ರಿ ಮಹಾಲಕ್ಷ್ಮಿನಗರ ಪ್ರದೇಶದ ಪಾನ್ ಅಂಗಡಿಯ ಮುಂಭಾಗ ಜಯಶ್ರೀ ಪಂಝಡೆ ಮತ್ತು ಆಕೆಯ ಸ್ನೇಹಿತೆ ಸವಿತಾ ಸಾಯೊ ಸಿಗರೇಟ್ ಸೇದುತ್ತಿದ್ದರು.‌ ಈ ವೇಳೆ ರಂಜಿತ್ ರಾಠೋಡ್ ಎಂಬಾತ ಸಿಗರೇಟ್ ಖರೀದಿಸಲು ಅಂಗಡಿಗೆ ಬಂದಿದ್ದಾನೆ‌. ಆತ ತಮ್ಮತ್ತ ಗುರಾಯಿಸಿ ನೋಡಿದ್ದಾನೆಂಸು ಮಹಿಳೆಯರು ಕೆರಳಿದ್ದಾರೆ. ಈ ವೇಳೆ ಮಹಿಳೆಯರು ಮತ್ತು ರಂಜಿತ್ ರಾಠೋಡ್ ನಡುವೆ ವಾಗ್ವಾದ ನಡೆದಿದೆ.

ಜಯಶ್ರೀ ಪಂಝಡೆ ತನ್ನನ್ನು ನಿಂದಿಸುತ್ತಾ, ಸಿಗರೇಟಿನ ಹೊಗೆ ಬಿಡುತ್ತಿರುವುದನ್ನು ರಂಜಿತ್ ರಾಠೋಡ್ ವೀಡಿಯೊ ಚಿತ್ರೀಕರಿಸಿದ್ದಾನೆ. ಈ ವೇಳೆ ವಾಗ್ವಾದ ಹೊಡೆದಾಟಕ್ಕೆ ತಿರುಗಿತ್ತು. ಆ ಬಳಿಕ ಜಯಶ್ರೀ ಫೊನ್ ಕರೆ ಮಾಡಿ ಸ್ನೇಹಿತ ಆಕಾಶ್ ರಾವುತ್‌ಗೆ ಬರುವುದಕ್ಕೆ ಹೇಳಿದ್ದಾಳೆ. ಆತ ತನ್ನ ಗೆಳೆಯರೊಂದಿಗೆ ಸ್ಥಳಕ್ಕೆ ಆಗಮಿಸಿ ರಂಜಿತ್‌ಗೆ ಹಲವಾರು ಬಾರಿ ಚೂರಿಯಿಂದ ಇರಿದಿದ್ದಾನೆ. ಘಟನೆ ಪ್ರದೇಶದಲ್ಲಿ ಅಳವಡಿಸಿದ್ದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸ್ಥಳಕ್ಕೆ ಧಾವಿಸಿದ ಪೋಲಿಸರು ತೀವ್ರವಾಗಿ ಗಾಯಗೊಂಡಿದ್ದ ರಾಠೋಡ್‌ನನ್ನು ಆಸ್ಪತ್ರೆಗೆ ಸೇರಿಸಿದ್ದರಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಜಯಶ್ರೀ, ಸವಿತಾ ಮತ್ತು ಆಕಾಶ್ ರಾವುತ್‌ನನ್ನು ಬಂಧಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu