ಉಳ್ಳಾಲ: ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಯುವಕ ಮೃತ್ಯು


ಉಳ್ಳಾಲ: ವಿವಾಹಿತ ಯುವಕನೋರ್ವನು ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಕೊಲ್ಯದ ಕನೀರುತೋಟದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಕೊಲ್ಯ ಕನೀರುತೋಟ ನಿವಾಸಿ ಜಿತೇಶ್ (28) ಮೃತಪಟ್ಟ ಯುವಕ. 

ಜಿತೇಶ್ ನಿನ್ನೆ ತಮ್ಮ ಅತ್ತೆ ಮನೆಯಲ್ಲಿ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಿದ್ದರು. ಬಳಿಕ ರಾತ್ರಿ ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆಗೆ ಹೋಗಿ ಬಂದಿದ್ದರು. ಬಳಿಕ ಊಟ ಮಾಡಿ ಮಲಗಿದ್ದ ಜಿತೇಶ್ ಇಂದು ಬೆಳಗ್ಗೆ ಎದ್ದೇಳದಿರುವುದನ್ನು ಗಮನಿಸಿ ಮನೆಮಂದಿ ಪರಿಶೀಲಿಸಿದಾಗ ಜಿತೇಶ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರು ಮಂಗಳೂರಿನ ಕೆಟಿಎಂ ಬೈಕ್ ಶೋರೂಂನಲ್ಲಿ ಉದ್ಯೋಗಿಯಾಗಿದ್ದರು.
 ಮೃತ ಜಿತೇಶ್ ತಂದೆ, ತಾಯಿ, ಪತ್ನಿ, ಇಬ್ಬರು ಸೋದರರನ್ನು ಅಗಲಿದ್ದಾರೆ.