ಬೆಳ್ತಂಗಡಿ: ತಂಡದಿಂದ ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ಹಲ್ಲೆ - ದೂರು ದಾಖಲು


ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಚಾಲಕನಿಗೆ ಕ್ಷುಲ್ಲಕ ಕಾರಣಕ್ಕೆ ತಂಡವೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ‌ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ ಎಂದು ದೂರು ದಾಖಲಾಗಿದೆ.

ಪುದುವೆಟ್ಟು ಗ್ರಾಮದ ಬೊಲ್ಮನಾರು ನಿವಾಸಿ ಹರೀಶ್ ಕುಮಾರ್ (37) ಹಲ್ಲೆಗೊಳಗಾದವರು. 

ಎ.23ರಂದು ಘಟನೆ ನಡೆದಿರುವ ಬಗ್ಗೆ ಇದೀಗ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ತವ್ಯಕ್ಕೆ ರಜೆಯಿದ್ದ ಹಿನ್ನೆಲೆಯಲ್ಲಿ ಹರೀಶ್ ಕುಮಾರ್ ಕಳೆಂಜ ಗ್ರಾಮದ ಮಣಿಗೇರಿ ಹೊಳೆಯಲ್ಲಿ ಜೀಪು ತೊಳೆಯುತ್ತಿದ್ದರು. ರಾತ್ರಿ 8.30ಸುಮಾರಿಗೆ ಸ್ಥಳೀಯರಾದ ಪ್ರಸನ್ನ, ಅಚ್ಚು ಶಿವಪ್ಪ ಉಮೇಶ್ ಗೌಡ ಎಂಬವರು ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಜೀಪನ್ನು ಅಲ್ಲಿಂದ ಮಾಣಿಗೇರಿ ರಸ್ತೆಯ ಸಮೀಪ ತಂದಿಟ್ಟು ಜೀಪಿನ ಟಯರ್ ಗಳ ಗಾಳಿಯನ್ನು ತೆಗೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಮತ್ತೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಬೊಬ್ಬೆ ಕೇಳಿ ಇತರರು ಬರುವುದನ್ನು ನೋಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಹರೀಶ್ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu