ಚಾಮರಾಜನಗರ: ಸದ್ಯ ಎಲ್ಲಾ ಕಡೆಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪೇಂದ್ರ' ಸಿನಿಮಾದ ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ..' ಹಾಡು ಭಾರಿ ಸದ್ದು ಮಾಡುತ್ತಿದೆ. ಇದೀಗ ಈ ಹಾಡಿನ ರೀಲ್ಸ್ ಮಾಡಿರುವ ಪತ್ನಿಯ ಮೇಲೆ ಬೇಸರಗೊಂಡ ಪತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗುರುವಾರ ಚಾಮರಾಜನಗರದ ಹನೂರು ಪ್ರದೇಶದಲ್ಲಿ ನಡೆದಿದೆ.
ಪಿ.ಜಿ.ಪಾಳ್ಯ ಗ್ರಾಮದ ಕುಮಾರ್(34) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಕುಮಾರ್ ಗೆ, ತನ್ನ ಪತ್ನಿ ಸದಾ ಸೋಶಿಯಲ್ ಮೀಡಿಯಾಕ್ಕೆ ಅಂಟಿಕೊಂಡಿರುವುದು ಇಷ್ಟವಾಗುತ್ತಿರಲಿಲ್ಲವಂತೆ. ಪತ್ನಿಯ ರೀಲ್ಸ್ ಗೀಳನ್ನು ವಿರೋಧಿಸುತ್ತಿದ್ದರಂತೆ. ಆದರೆ ಕುಮಾರ್ ಅವರ ಪತ್ನಿ ರೂಪಾ ಇದಕ್ಕೆ ಕ್ಯಾರೇ ಎನ್ನ ದೆ ತಮ್ಮ ಸೋದರಮಾವ ಹಾಗೂ ಸಹೋದರಿ ಜತೆಗೆ ಸೇರಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಂಗ್‌ಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ರೀಲ್ಸ್ ವಿಚಾರಕ್ಕೆ ಊರಿನಲ್ಲಿ ಕುಮಾರ್‌ನನ್ನು ಕೆಲವರು ಕಾಲೆಳೆದು ಯಾರಪ್ಪಾ ಕರಿಮಣಿ ಮಾಲೀಕ ಎಂದು ಹೀಯಾಳಿಸಿದ್ದರಂತೆ. ಇದರಿಂದ ಮನನೊಂದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೀಲ್ಸ್ ವಿಚಾರ ದಂಪತಿಗಳ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತು. ಈ ವಿಚಾರ ತೀವ್ರ ಸ್ವರೂಪಕ್ಕೆ ಹೋಗಿದ್ದು, ಕುಮಾರ್ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.