ಮಗುವಿನ ಹತ್ಯೆ ಪ್ರಕರಣ- ಮಗನ ಮುಖದಿಂದ ಗಂಡನ ನೆನಪಾಗ್ತಿದ್ದಕ್ಕೆ ಹತ್ಯೆ:ಸೂಚನಾ!



ಪಣಜಿ: ಗೋವಾದಲ್ಲಿ ತನ್ನ 4 ವರ್ಷದ ಮಗುವಿನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಸ್ಟಾರ್ಟಪ್ ಕಂಪನಿಯ ಸಿಇಒ ಸೂಚನಾ ಸೇರ್, ತನ್ನ ಮಗನ ಮುಖ, ತನ್ನ ಪತಿಯನ್ನೇ ಹೋಲುತ್ತಿರುವ ಕಾರಣ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಕೊಲೆಗೂ ಮುನ್ನ ಹಲವು ಬಾರಿ ಕುಟುಂಬ ಮತ್ತು ಸ್ನೇಹಿತರ ಜೊತೆ ಇಂಥದ್ದೊಂದು ವಿಷಯ ಹಂಚಿಕೊಂಡಿದ್ದರು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. 

'ನನ್ನ ಮಗನ ಮುಖ ಅವರ ತಂದೆಯನ್ನೇ ಹೋಲುತ್ತದೆ. ಆತನನ್ನು ನೋಡಿದಾಗಲೆಲ್ಲಾ ನನಗೆ ನನ್ನ ಪತಿಯ ಮುಖ ಮತ್ತು ನಮ್ಮಿಬ್ಬರ ನಡುವಿನ ಹಳಸಿದ ಸಂಬಂಧವೇ ನೆನಪಿಗೆ ಬರುತ್ತದೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಪುತ್ರನನ್ನು ಕೊಲೆ ಮಾಡಲು ಅದೇ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಗೋವಾದಲ್ಲಿ ಮಗುವಿನ ಕೊಲೆ ಮಾಡಿ, ಶವವನ್ನು ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಸಾಗಿಸುತ್ತಿದ್ದ ಸಮಯದಲ್ಲಿ ಸೂಚನಾಳನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಸೂಚನಾಳನ್ನು ಗೋವಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.