ಮೈಚಾಂಗ್ ಚಂಡಮಾರುತ ಚೆನ್ನೈನಲ್ಲಿ ಭಾರೀಮಳೆ - ಐವರು ಸಾವು, ವಿಮಾನಗಳ ಹಾರಾಟಕ್ಕೂ ತೊಂದರೆ
Monday, December 4, 2023
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೈಚಾಂಗ್ ಚಂಡಮಾರುತ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಗೆ ಸೋಮವಾರ ರಾತ್ರಿ ಅಪ್ಪಳಿಸಿದ ಪರಿಣಾಮ ಚೆನ್ನೈನಲ್ಲಿ ಭಾರೀ ಮಳೆ ಸುರಿದಿದೆ. ಪರಿಣಾಮ ಚೆನ್ನೈನ ವಿಮಾನ ನಿಲ್ದಾಣ, ಮೆಟ್ರೊನಿಲ್ದಾಣಗಳು ಸೇರಿ ಬಹುತೇಕ ಬಡಾವಣೆಗಳು ಜಲಾವೃತಗೊಂಡಿದೆ. ಮಳೆಗೆ ಸಂಬಂಧಿಸಿದಂತೆ ನಡೆದ ಘಟನೆಗಳಿಂದ ವಿವಿಧೆಡೆ ಐದು ಮಂದಿ ಮೃತಪಟ್ಟಿದ್ದಾರೆ.
ಮೈಚಾಂಗ್ ಚಂಡಮಾರುತವು ಬಲವಾದ ಗಾಳಿಯೊಂದಿಗೆ ಬಿರುಸಿನ ಭಾರಿ ಮಳೆ ಸುರಿಸುತ್ತಿದೆ. ವಿಮಾನ ನಿಲ್ದಾಣದ ರನ್‌ವೇ ಜಲಾವೃತಗೊಂಡಿದೆ. ಇದು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿವೆ. ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಬೆಂಗಳೂರಿನಿಂದ ವಿಮಾನಗಳು ಕಾರ್ಯಾಚರಣೆಗೊಳ್ಳುವಂತೆ ಮಾಡಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆಯವರೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಜಲಾವೃತಗೊಂಡಿರುವ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ, ರಸ್ತೆಗಳಲ್ಲಿ ಮೊಸಳೆಗಳು ಕಾಣಿಸಿಕೊಂಡಿವೆ. ಚೆನ್ನೈನ ಹಲವು ಮೆಟ್ರೋ ನಿಲ್ದಾಣಗಳ ಬಳಿ ಜಲಾವೃತಗೊಂಡಿವೆ. ಸೇಂಟ್ ಥಾಮಸ್ ಮೆಟ್ರೋ ನಿಲ್ದಾಣದಲ್ಲಿ 4 ಅಡಿ ನೀರು ಸಂಗ್ರಹಗೊಂಡಿದ್ದು, ನಿಲ್ದಾಣದ ಪ್ರವೇಶವನ್ನು ಕಡಿತಗೊಳಿಸಲಾಗಿದೆ. ಆಲಂದೂರಿನಲ್ಲಿ ಮೆಟ್ರೋ ರೈಲು ಹತ್ತಲು ಪ್ರಯಾಣಿಕರಿಗೆ ಸೂಚಿಸಲಾಯಿತು.
ಭಾರೀ ಮಳೆಯಿಂದಾಗಿ ನಗರದಾದ್ಯಂತ ಐದು ಸಾವು ಸಂಭವಿಸಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ. ವೈದ್ಯನಾಥನ್ ಮೇಲ್ಸೇತುವೆ ಬಳಿಯ ಪ್ಲಾಟ್‌ಫಾರ್ಮ್‌ನಲ್ಲಿ 70 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಫೋರ್‌ಶೋರ್ ಎಸ್ಟೇಟ್ ಬಸ್ ಡಿಪೋದಲ್ಲಿ 60 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಮತ್ತೊಂದು ಮೃತದೇಹ ಪತ್ತೆಯಾಗಿದೆ. ನಿರ್ಮಾಣ ಹಂತದ ಮನೆ ಕುಸಿದು ಇಬ್ಬರು ಛತ್ತೀಸ್ಗಢ ಮೂಲದವರು ಮೃತಪಟ್ಟಿದ್ದಾರೆ.