ಪೂಂಛ್ ನಲ್ಲಿ ಉಗ್ರರ ದಾಳಿ : ಹುತಾತ್ಮರಾದ ಐವರು ಯೋಧರು, ಇಬ್ಬರಿಗೆ ಗಂಭೀರ ಗಾಯ


ಶ್ರೀನಗರ: ಭಾರತೀಯ ಸೇನಾಪಡೆಯ ವಾಹನಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿರುವ ದಾಳಿಯಲ್ಲಿ ಐವರು ಯೋಧರು ಹುತಾತ್ಮವಾಗಿರುವ ಘಟನೆ ಜಮ್ಮು-ಕಾಶ್ಮೀರದ ಪೂಂಛ್​ನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಡೇರಾ ಕಿ ಗಲಿ ಮತ್ತು ಬುಫ್ಲಿಯಾಜ್‌ ನಡುವೆ ಧಾತ್ಯರ್​ಮೋರ್​ನಲ್ಲಿ ತಡರಾತ್ರಿ 3.45ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂಂಛ್​ನ ಬುಫ್ಲಿಯಾಜ್ ಬಳಿ ಯೋಧರು ಸೇನಾ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಉಗ್ರರ ಈ ಏಕಾಏಕಿ ದಾಳಿಗೆ ಯೋಧರು ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಸುದ್ದಿ ಮೂಲಗಳ ಪ್ರಕಾರ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ (LET) ಸಹವರ್ತಿ ಸಂಘಟನೆ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (PAFF) ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ತಿಳಿದು ಬಂದಿದೆ.

ಭಯೋತ್ಪಾದಕರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಯೋಧರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆದ ಪ್ರದೇಶವನ್ನು ಸೇನೆಯ ಯೋಧರು ಸುತ್ತುವರಿದಿದ್ದಾರೆ. ಭಯೋತ್ಪಾದಕರನ್ನು ಮಣಿಸಲು ಹೆಚ್ಚುವರಿಯಾಗಿ ಯೋಧರನ್ನು ನಿಯೋಜಿಸಲಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.