ಮಂಗಳೂರು: ಫ್ಲ್ಯಾಟ್ ನೀಡುವುದಾಗಿ ದಂಪತಿಗೆ 30ಲಕ್ಷ ರೂ. ವಂಚನೆ - ಬಿಲ್ಡರ್ ಗಳ ವಿರುದ್ಧ ದೂರು ದಾಖಲು
Friday, December 1, 2023
ಮಂಗಳೂರು: ಅಪಾರ್ಟ್ ಮೆಂಟ್ ವೊಂದರಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ 30 ಲಕ್ಷ ರೂ. ಪಡೆದು ಬಿಲ್ಡರ್ ಗಳಿಬ್ಬರು ವಂಚಿಸಿದ್ದಾರೆಂದು ಕೇರಳದ ಪಾಲಕ್ಕಾಡ್ ಮೂಲದ ದಂಪತಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ನಗರದ ಮಂಗಳಾದೇವಿ ಸಮೀಪದ ಫ್ಲ್ಯಾಟ್ ನೀಡುವುದಾಗಿ ಹೇಳಿ 30 ಲಕ್ಷ ರೂ. ಪಡೆದು ವಂಚನೆ ಮಾಡಲಾಗಿದೆ. ಪಾಲಕ್ಕಾಡ್ ಮೂಲದ ದಂಪತಿ ರುಕಿಯಾಬಿ ಮತ್ತು ಮೊಹಮ್ಮದ್ ಆಲಿ ಹಣ ಕಳೆದುಕೊಂಡವರು. 2015ರಲ್ಲಿ ಅಶ್ರಫ್ ಹಸನ್ ಹಾಗೂ ಮೊಹಮ್ಮದ್ ಸಲಾಂ ಎಂಬಿಬ್ಬರು ಪರಿಚಿತರಾಗಿ ತಮ್ಮನ್ನು ನಿರ್ಮಾಣ ಸಂಸ್ಥೆಯ ಪಾಲುದಾರರೆಂದು ನಂಬಿಸಿದ್ದರು. ತಾವು ಜಪ್ಪು ಶಾದಿಮಹಲ್ ಬಳಿಯಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ ಮೊದಲನೇ ಮಹಡಿಯನ್ನು 31,75,500 ರೂ.ಗೆ ಮಾರಾಟ ಮಾಡುತ್ತಿದ್ದೇವೆ. 2017ರಲ್ಲಿ ಕಟ್ಟಡ ಪೂರ್ಣವಾಗುತ್ತದೆ ಎಂದು ತಿಳಿಸಿದ್ದರು.
ಅದರಂತೆ, ಆ ಅಪಾರ್ಟ್ಮೆಂಟ್ ನಲ್ಲಿ ಫ್ಲ್ಯಾಟ್ ಖರೀದಿಸಲು 20 ಲಕ್ಷ ರೂ. ಮೌಲ್ಯದ ಚೆಕ್ ಹಾಗೂ 10 ಲಕ್ಷ ರೂ. ನಗದು ರೂಪದಲ್ಲಿ ಹಣವನ್ನು ದಂಪತಿ ಆರೋಪಿಗಳಿಗೆ ಪಾವತಿಸಿದ್ದರು. 2017ರಲ್ಲಿ ಅಪಾರ್ಟ್‌ಮೆಂಟ್ ಪೂರ್ಣಗೊಳ್ಳದೇ ಇದ್ದುದರಿಂದ ಸಂಸ್ಥೆಯವರನ್ನು ಸಂಪರ್ಕಿಸಿ ಹಣ ವಾಪಸ್ ಕೇಳಿದ್ದರು. ಆದರೆ ಇಬ್ಬರು ಕೂಡ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದು ಬಳಿಕ ತಲಾ 10 ಲಕ್ಷ ರೂ. ಮೌಲ್ಯದ 3 ಚೆಕ್‌ಗಳನ್ನು ನೀಡಿದ್ದರು. ಅದನ್ನು ಬ್ಯಾಂಕ್‌ಗೆ ಹಾಕಿದಾಗ ಬೌನ್ಸ್ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.