ರೀಲ್ಸ್ ಹುಚ್ಚಾಟದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಜೋಡಿಯಿಂದ ಅನುಚಿತ ವರ್ತನೆ: ಎದುರಾದ ಸಂಕಷ್ಟ


ನೋಯ್ಡಾ: ಉತ್ತರಪ್ರದೇಶದ ನೋಯ್ಡಾದ ಜೋಡಿಯೊಂದು ಸಾರ್ವಜನಿಕವಾಗಿ ಸಲುಗೆಯಿಂದ ವರ್ತಿಸಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಈ ಜೋಡಿಗೀಗ ಸಂಕಷ್ಟ ಎದುರಾಗಿದೆ.

ಪಾರ್ಕೊಂದರಲ್ಲಿ ಹಸ್ತದ ಕಲಾಕೃತಿಯ ಮೇಲೆ ಕುಳಿತು ಯುವತಿ ಬಾಟಲ್​ನಿಂದ ನೀರು ಕುಡಿಯುತ್ತಿರುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಯುವಕನೊಬ್ಬ ಯುವತಿ ಮುಂದೆ ಮಂಡಿಯೂರಿ, ಕೈ ಬೆರಳುಗಳನ್ನು ಹಿಡಿದು ರಿಂಗ್​ ತೊಡಿಸುತ್ತಾನೆ. ಇದಾದ ಬಳಿಕ ಯುವತಿ ತನ್ನ ಬಾಯಿಯಲ್ಲಿದ್ದ ನೀರನ್ನು ಯುವಕ ಬಾಯಿಗೆ ಉಗಿಯುತ್ತಾಳೆ. ಬಳಿಕ ಯುವಕನು ಸಹ ವಾಪಸ್​ ಯುವತಿಯ ಬಾಯಿಗೆ ಉಗಿಯುತ್ತಾನೆ. ಆ ನೀರನ್ನು ಯುವತಿ ಕುಡಿಯುತ್ತಾಳೆ. ಬಳಿಕ ಇಬ್ಬರು ಗಹಗಹಿಸಿ ನಗುತ್ತಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದು ನೋಯ್ಡಾದ ಉಪ ಪೊಲೀಸ್ ಆಯುಕ್ತರ ಗಮನಕ್ಕೂ ಬಂದಿದ್ದು, ಘಟನೆ ನಡೆದ ಪ್ರದೇಶದಲ್ಲಿ ಗಸ್ತು ಮತ್ತು ತಪಾಸಣೆ ಹೆಚ್ಚಿಸಲು ಸ್ಟೇಷನ್ ಇನ್‌ಚಾರ್ಜ್ ಸೆಕ್ಟರ್-113 ನೋಯ್ಡಾಗೆ ನಿರ್ದೇಶಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದಿಷ್ಟೇ ಅಲ್ಲದೆ, ಸೈಬರ್ ಸೆಲ್‌ ನೆರವಿನೊಂದಿಗೆ ವಿಡಿಯೋದಲ್ಲಿರುವ ಜೋಡಿಯನ್ನು ಮತ್ತು ದೃಶ್ಯ ಸೆರೆಹಿಡಿದ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿ ಅನುಚಿತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಸಾರ್ವಜನಿಕ ವ್ಯವಸ್ಥೆಯೊಳಗೆ ಜೋಡಿ ವರ್ತನೆ ಸ್ವೀಕಾರ್ಹವಲ್ಲ, ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅನೇಕರು ಒತ್ತಾಯ ಮಾಡಿದ್ದರು. ಅದೇ ರೀತಿ ಪೊಲೀಸರು ಈ ಘಟನೆಯ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಶೀಘ್ರದಲ್ಲೇ ನವಜೋಡಿ ಬಿಸಿ ಮುಟ್ಟಿಸುವ ಸಾಧ್ಯತೆ ದಟ್ಟವಾಗಿದೆ.

ಸ್ವಾರಸ್ಯಕರ ಸಂಗತಿ ಏನೆಂದರೆ, ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದೆಹಲಿ ಮೆಟ್ರೋದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಜೋಡಿಯೊಂದು ಪರಸ್ಪರ ಬಾಯಿಂದ ತಂಪು ಪಾನೀಯವನ್ನು ವಿನಿಮಯ ಮಾಡುತ್ತಿರುವುದನ್ನು ಚಿತ್ರೀಕರಿಸಲಾಗಿತ್ತು ಮತ್ತು ವಿಡಿಯೋ ಸಹ ವೈರಲ್​ ಆಗಿತ್ತು.