ದುಬೈನಲ್ಲಿ 16 ಕೋಟಿ ರೂಪಾಯಿ ಬಂಪರ್ ಲಾಟರಿ ಗೆದ್ದ ತಮಿಳುನಾಡಿನ ವ್ಯಕ್ತಿ


ದುಬೈ: ಅದೃಷ್ಟವೆನ್ನುವುದು ಯಾವಾಗ? ಹೇಗೆ ಬರುತ್ತದೆ ಎಂದು ಹೇಳಲಸಾಧ್ಯ. ಜೊತೆಗೆ ಸಾಮಾನ್ಯನೊಬ್ಬನಿಗೆ ಲಾಟರಿ ಬಂದು ಆತ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆ. ಅಂಥದ್ದೆ ಮಹಿಮೆ ಇದೀಗ ತಮಿಳುನಾಡುವ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ.

ಶುಕ್ರವಾರ ಎಮಿರೇಟ್ಸ್ ಲಕ್ಕಿ ಡ್ರಾ ಫಾಸ್ಟ್​ 5 ಗ್ರ್ಯಾಂಡ್​ ಬಹುಮಾನ ವಿಜೇತನ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ ಮೊದಲ ಬಹುಮಾನಕ್ಕೆ ತಮಿಳುನಾಡಿನ ಆಂಬೂರ್​ ಮೂಲದ ಮಗೇಶ್​ ನಟರಾಜನ್​ ಭಾಜನರಾಗಿದ್ದಾರೆ. ಇವರಿಗೆ 16 ಕೋಟಿ ರೂ. ಬಹುಮಾನ ಒಲಿದು ಬಂದಿದೆ.

ಮೊದಲ ಬಹುಮಾನದಲ್ಲಿ ಗಳಿಸಿರುವ ಈ ಹಣವನ್ನು ಮಗೇಶ್​ ಅವರಿಗೆ ಪೂರ್ತಿಯಾಗಿ ನೀಡೋಲ್ಲ. ಬದಲಾಗಿ ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು 5.5 ಲಕ್ಷ ರೂ. ಹಣವನ್ನು ಮಗೇಶ್​ ಪಡೆಯಲಿದ್ದಾರೆ. ಇದನ್ನು ಕೇಳಿದರೇ ನಿಜವಾದ ಅದೃಷ್ಟ ಎಂದರೆ ಇವರೇ ಎಂದು ಹೇಳುತ್ತಾರೆ.

ಮಗೇಶ್​ ನಟರಾಜನ್​ ತಮಿಳುನಾಡಿನ ಆಂಬೂರ್​ ಮೂಲದವರು. ಇವರು ಯುಎಇನಲ್ಲಿ ಪ್ರಾಜೆಕ್ಟ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಗೇಶ್ ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್‌ ವಿಭಾಗದಲ್ಲಿ ಡಿಪ್ಲೊಮಾ ಪಡೆದು ಬಳಿಕ ಅಣ್ಣಾಮಲೈ ಕಾಲೇಜಿನಲ್ಲಿ ಬಿಬಿಎ ಡಿಗ್ರಿ ಪಡೆದಿದ್ದಾರೆ. ನಟರಾಜನ್ ಸದ್ಯ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಜರ್ಮನ್ ಎಂಎನ್​ಸಿ ಕಂಪೆನಿ ಸೀಮೆನ್ಸ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಟರಾಜನ್​​ 2019ರಿಂದ ಈವರೆಗೆ ಸೌದಿ ಅರೇಬಿಯಾದಲ್ಲಿ ಅವರ ನಾಲ್ಕು ವರ್ಷಗಳ ವೃತ್ತಿ ಜೀವನ ಒಂದು ಹೊಸ ತಿರುವು ನೀಡಿತು. ದುಬೈ ಪ್ರವಾಸದ ಸಮಯದಲ್ಲಿ ದುಬೈನ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದಾದ ಎಮಿರೇಟ್ಸ್ ಲಕ್ಕಿ ಡ್ರಾ ಫಾಸ್ಟ್​ 5 ಗ್ರ್ಯಾಂಡ್​ ಬಹುಮಾನದ ಬಗ್ಗೆ ತಿಳಿದುಕೊಂಡರು. ತಾನು ಲಕ್ಕಿ ಡ್ರಾ ಗೆಲ್ಲುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ ಎಂದು ಮಗೇಶ್​ ಹೇಳಿದ್ದಾರೆ.

ನಾನು ಓದುವ ಸಂದರ್ಭದಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇನೆ. ನನ್ನ ವಿದ್ಯಾಭ್ಯಾಸವನ್ನು ಮುಗಿಸಿದಂತೆ ನನಗೆ ಸಾಕಷ್ಟು ಸಾಮಾಜಿಕ ಬೆಂಬಲವೂ ಸಿಕ್ಕಿತು. ಇದೀಗ ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಸಮಯ ಬಂದಿದೆ. ಅಗತ್ಯವಿರುವ ಜನರಿಗೆ ನೆರವಾಗುತ್ತೇನೆ ಎಂದಿರುವ ಮಗೇಶ್​, ತನ್ನಿಬ್ಬರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡುತ್ತೇನೆ ಮತ್ತು ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ ಹಣ ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದು ಮಗೇಶ್​ ಹೇಳಿದ್ದಾರೆ.