-->
1000938341
ಉಳ್ಳಾಲದ ಯುವಕ ಪತ್ನಿ ಮನೆಯಲ್ಲಿ ನೇಣಿಗೆ ಶರಣು: ಸಾಲದ ಹೊರೆ, ಸಾವಿನ ಹಿಂದೆ ಬೆಟ್ಟಿಂಗ್ ಜಾಲದ ಕೈವಾಡ ಶಂಕೆ

ಉಳ್ಳಾಲದ ಯುವಕ ಪತ್ನಿ ಮನೆಯಲ್ಲಿ ನೇಣಿಗೆ ಶರಣು: ಸಾಲದ ಹೊರೆ, ಸಾವಿನ ಹಿಂದೆ ಬೆಟ್ಟಿಂಗ್ ಜಾಲದ ಕೈವಾಡ ಶಂಕೆ

ಉಳ್ಳಾಲ: ಇಲ್ಲಿನ ಕೊಂಡಾಣ ಮಿತ್ರನಗರದ ಯುವಕನೋರ್ವನು ಬಂಟ್ವಾಳದ ತನ್ನ ಪತ್ನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾಲದ ಹೊರೆಯಲ್ಲಿದ್ದ ಇವರ ಸಾವಿಗೆ ಬೆಟ್ಟಿಂಗ್ ಜಾಲವೇ ಕಾರಣವೆಂದು ತಿಳಿದುಬಂದಿದೆ.

ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೊಂಡಾಣ, ಮಿತ್ರನಗರ ನಿವಾಸಿ ರವೀಂದ್ರ(35) ಆತ್ಮಹತ್ಯೆಗೈದ ವ್ಯಕ್ತಿ. 

ರವೀಂದ್ರ ನಿನ್ನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದರು. ಮಧ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಒಬ್ಬಂಟಿಯಾಗಿ ಪತ್ನಿಯ ಮನೆ ಬಂದಿದ್ದಾರೆ. ಸಾಯಂಕಾಲ ಪತ್ನಿ ಮೊಬೈಲ್ ಕರೆ ಮಾಡಿದ್ದಾರೆ. ಆದರೆ ರವೀಂದ್ರ ಕರೆ ಸ್ವೀಕರಿಸಿಲ್ಲ. ಆದ್ದರಿಂದ ಪತ್ನಿ ನೆರೆಹೊರೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ.

ನೆರೆಮನೆಯ ನಿವಾಸಿಗಳು ಮನೆ ಕಡೆ ತೆರಳಿದಾಗ ರವೀಂದ್ರ ಮನೆಯ ಚಾವಡಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಕೊಂಡಾಣ, ಮಿತ್ರನಗರದಲ್ಲಿ ಮೃತ ರವೀಂದ್ರ ಅವರ ಮೃತದೇಹದ ಅಂತ್ಯ ಸಂಸ್ಕಾರ ನಡೆದಿದೆ.

ರವೀಂದ್ರ ಅವರು ಕ್ರಿಕೆಟ್ ಬೆಟ್ಟಿಂಗಲ್ಲಿ ಸಕ್ರಿಯರಾಗಿದ್ದು ಸಾಲದ ಹೊರೆಯಲ್ಲಿದ್ದರೆಂದು ಅವರನ್ನು ಬಲ್ಲ ಆಪ್ತರು ತಿಳಿಸಿದ್ದಾರೆ. ಬೆಟ್ಟಿಂಗ್ ಜಾಲದ ಬುಕ್ಕಿಗಳ ಕಿರುಕುಳದಿಂದಲೇ ಅವರು ಸಾವಿಗೆ ಶರಣಾಗಿದ್ದಾರೆಂದು ಸ್ನೇಹಿತರು ಹೇಳುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article