ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಇಂದು ಸೆ.26ರಂದು ಕನ್ನಡ ಪರ ಸಂಘಟನೆಗಳು ಮತ್ತು ರೈತರು ಕರೆ ನೀಡಿರುವ ಬಂದ್‌ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಬಂದ್ ಕಾರ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ಅಸಮರ್ಪಕ ಆಹಾರವನ್ನು ಪೂರೈಕೆ ಮಾಡಿರುವುದು ಬಯಲಾಗಿದೆ.
ಬೆಂಗಳೂರು ಬಂದ್ ಹಿನ್ನೆಲೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಯಶವಂತಪುರ ಸಂಚಾರಿ ಪೊಲೀಸರಿಗೆ ನೀಡಿದ ಬೆಳಗ್ಗಿನ ಉಪಹಾರದಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಅವರಿಗೆ ಬೆಳಗ್ಗಿನ ಉಪಹಾರಕ್ಕೆ ರೈಸ್ ಬಾತ್ ನೀಡಲಾಗಿತ್ತು. ಈ ವೇಳೆ ಪೊಲೀಸ್ ಆ ಪೊಟ್ಟಣವನ್ನು ಓಪನ್ ಮಾಡಿದಾಗ ಸತ್ತ ಇಲಿಯನ್ನು ಕಂಡು ಗಾಬರಿಯಾಗಿದ್ದಾರೆ. ಪೊಲೀಸರಿಗೆ ‘ಇಲಿ’ ಇರುವ ಉಪಹಾರ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಯಶವಂತಪುರದಲ್ಲಿರುವ ಅಶೋಕ್ ಟಿಫಿನ್ ಸೆಂಟರ್‌ನಲ್ಲಿ ಒಟ್ಟು 180 ಜನಕ್ಕೆ ತಿಂಡಿಯನ್ನು ಸಿದ್ಧಪಡಿಸಿಲಾಗಿತ್ತು. ಬೆಳಗ್ಗೆ 7-30ಕ್ಕೆ ತಿಂಡಿಯನ್ನು ವಿತರಿಸಲಾಗಿದೆ. ಈ ವೇಳೆ ಸಿಬ್ಬಂದಿಯೊಬ್ಬರು ಪ್ಯಾಕೆಟ್ ತೆರೆದಾಗ ಇಲಿ ಪತ್ತೆಯಾಗಿದೆ. ಕೂಡಲೇ ತಮ್ಮ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತಿಂಡಿ ತಿನ್ನದಂತೆ ಇತರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹೀಗಾಗಿ ಯಾವ ಸಿಬ್ಬಂದಿ ತಿಂಡಿ ಸೇವಿಸಿಲ್ಲ. ಇದರಿಂದ ಆಗಬಹುದಾದ ಅನುಹಾತವೊಂದು ತಪ್ಪಿದೆ ಎನ್ನಲಾಗಿದೆ.