ಅಭಿನವ ಹಾಲಶ್ರೀ ಮಠದಲ್ಲಿ ಕಂತೆ ಕಂತೆ ನೋಟು ಪತ್ತೆ : ಹಣ ಇಟ್ಟ ಅಪರಿಚಿತ
Wednesday, September 20, 2023
ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮತ್ತೊಬ್ಬ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಗೆ ಸಂಬಂಧಿಸಿದಂತೆ ಇನ್ನೊಂದಷ್ಟು ಮಾಹಿತಿ ಹೊರಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟ 65 ಲಕ್ಷ ರೂ. ಹಣವನ್ನು ಹಾಲಶ್ರೀ ಸ್ವಾಮೀಜಿ ತನ್ನ ಚಾಲಕನ ಮೂಲಕ ಮೈಸೂರಿನ ಕಚೇರಿಯೊಂದಕ್ಕೆ ಅಪರಿಚಿತ ವ್ಯಕ್ತಿಯೊಬ್ಬನ ಮೂಲಕ ಕಳುಹಿಸಿದ್ದ. ಆದರೆ ಬಳಿಕ ಆ ಹಣ ತೆಗೆದುಕೊಳ್ಳಲು ಯಾರೂ ಬಂದಿರದ ಕಾರಣ ಅಪರಿಚಿತ ಆ ಹಣವನ್ನು ಮತ್ತೆ ಮಠಕ್ಕೆ ಕೊಂಡೊಯ್ದು ಇರಿಸಿದ್ದ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿಯ ಮಠಕ್ಕೆ ಇಂದು ಬೆಳಗ್ಗೆ ಬಂದಿದ್ದ ಆ ಅಪರಿಚಿತ ವ್ಯಕ್ತಿ ಹಣ ಇಟ್ಟು, ಅದನ್ನು ವೀಡಿಯೋ ಮಾಡಿ ಹೇಳಿಕೊಂಡಿದ್ದಾನೆ.
ಮಠಕ್ಕೆ ಬಂದು ಪಲ್ಲಕ್ಕಿ ಬಳಿ ಹಣದ ಬ್ಯಾಗ್ ಇಟ್ಟು, ನಾನು ಸ್ವಾಮೀಜಿ ಕೊಟ್ಟಿದ್ದ ಹಣದ ಬ್ಯಾಗ್ ಇಟ್ಟಿದ್ದೇನದು ವಿಡಿಯೋ ಮಾಡಿದ್ದಾನೆ. ಹಣದ ಬ್ಯಾಗ್ ಪತ್ತೆಯಾದ ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಸಿಸಿಬಿ ಪೊಲೀಸರು ಬಂದು ಪರಿಶೀಲನೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ. ಈ ಹಣದಲ್ಲಿ ವಕೀಲರ ಫೀಸ್ ಖರ್ಚು ಎಂದು ಚಾಲಕ ರಾಜು 4 ಲಕ್ಷ ರೂ. ತೆಗೆದುಕೊಂಡಿದ್ದ. ಉಳಿದ ಹಣ ಹಾಲಶ್ರೀ ಮಠದ ಬಳಿ ಇಟ್ಟಿದ್ದೇನೆ ಎಂದು ಈ ಅಪರಿಚಿತ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾನೆ.
ಇನ್ನು ಆ ದಿನ ಸ್ವಾಮೀಜಿ ಚಾಲಕನನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರಿಂದ ಅವರ ಲಾಸ್ಟ್ ಲೊಕೇಷನ್ ಮೈಸೂರಿನಲ್ಲಿ ಟ್ರೇಸ್ ಆಗಿತ್ತು. ಬಳಿಕ ಮೈಸೂರು ಭಾಗದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದ ಪೊಲೀಸರು, ಸ್ವಾಮೀಜಿಯ ಚಾಲಕನನ್ನು ವಶಕ್ಕೆ ಪಡೆದಿದ್ದರು. ಇನ್ನು ಆ ಅಪರಿಚಿತ ವ್ಯಕ್ತಿ ಯಾರು? ಆ ಲಕ್ಷಾಂತರ ಹಣ ಗೋವಿಂದಬಾಬು ಪೂಜಾರಿಗೆ ಸೇರಿದ್ದಾ? ಎಂಬಿತ್ಯಾದಿ ನಿಟ್ಟಿನಲ್ಲಿ ಪೊಲೀಸರ ತನಿಖೆ ನಡೆಯುತ್ತಿದೆ.