YOUTUBE ನೋಡಿ ಪತ್ನಿಗೆ ಹೆರಿಗೆ ಮಾಡಿದ ಪತಿ- ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

ತಮಿಳುನಾಡು : ಗಂಡ ಯೂಟ್ಯೂಬ್​​ ನೋಡಿ ಪತ್ನಿಗೆ ಹೆರಿಗೆ ಮಾಡಿಸಲು ಹೋಗಿ ಸಾವು ಸಂಭವಿಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

 ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಲೋಕನಾಯಕಿ (27) ಎಂದು ಗುರುತಿಸಲಾಗಿದೆ. ಆರೋಪಿ ಮಾದೇಶ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಗಸ್ಟ್​ 22ರ ಮಂಗಳವಾರ ಕೃಷ್ಣಗಿರಿಯ ನಿವಾಸದಲ್ಲಿ ಮಹಿಳೆ ಗಂಡು ಮಗುವಿನ ಜನ್ಮ ನೀಡಿ ಮೃತಪಟ್ಟಿದ್ದಾರೆ. ಲೋಕನಾಯಕಿ ಪೋಚಂಪಲ್ಲಿಯ ಪುಲಿಯಮ್‌ಪಟ್ಟಿ ಗ್ರಾಮದ ನಿವಾಸಿ. ಇವರು 2021ರಲ್ಲಿ ಧರ್ಮಪುರಿ ಜಿಲ್ಲೆಯ ಅನುಮಂತಪುರಂ ಗ್ರಾಮದ ಮಾದೇಶ್​ ಎಂಬಾತನನ್ನು ವಿವಾಹವಾಗಿದ್ದರು.

ಸಾವಯವ ಕೃಷಿ ಮತ್ತು ಸ್ವಯಂ ಚಿಕಿತ್ಸಾ ತಂತ್ರಗಳ ಪ್ರತಿಪಾದಕನಾಗಿದ್ದ ಮಾದೇಶ್​, ಗರ್ಭವತಿಯಾಗಿದ್ದ ಪತ್ನಿಯನ್ನು ವೈದ್ಯಕೀಯ ಚಿಕಿತ್ಸೆಯಿಂದ ದೂರ ಇರಿಸಿದ್ದನು. ಈಕೆಗೆ ಪ್ರಾಕೃತಿಕ ಚಿಕಿತ್ಸೆ ನೀಡಲು ಮುಂದಾಗಿದ್ದ ಎಂದು ಹೇಳಲಾಗಿದೆ.ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯ ಗರ್ಭಧಾರಣೆ ಬಗ್ಗೆ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಲು ಆರೋಗ್ಯ ಸಿಬ್ಬಂದಿಗೆ ಇವರು ಅವಕಾಶ ನೀಡಿಲ್ಲ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಅಗತ್ಯ ಲಸಿಕೆ ಮತ್ತು ಔಷಧಗಳನ್ನು ಸೂಚಿಸಿದರೂ ತೆಗೆದುಕೊಳ್ಳಲು ನಿರಾಕರಿಸಿದ್ದರು. ಆದರೆ ಗ್ರಾಮದ ನರ್ಸ್​ ಒಬ್ಬರು ಒತ್ತಾಯದಿಂದ ಮಹಿಳೆಗೆ ಎರಡು ಲಸಿಕೆಗಳನ್ನು ನೀಡಿದ್ದರು.

ಮಹಿಳೆಯ ಸ್ಥಿತಿ ಗಂಭೀರವಾದಾಗ ವೈದ್ಯರು ಸೂಕ್ತ ಚಿಕಿತ್ಸೆಗೆ ಒಳಪಡಿಸುವಂತೆ ಸೂಚಿಸಿದರೂ, ಮಾದೇಶ್​ ಆಕೆಯನ್ನು ತನ್ನ ಊರಿನಿಂದ ಪುಲಿಯಂಪಟ್ಟಿ ಗ್ರಾಮಕ್ಕೆ ಕರೆದುಕೊಂಡು ಪ್ರಾಕೃತಿಕ ಚಿಕಿತ್ಸೆ ನೀಡಲು ಮುಂದಾಗಿದ್ದಾನೆ. ಗರ್ಭವತಿ ಪತ್ನಿಗೆ ವೈದ್ಯರು ಸೂಚಿಸಿದ ಆಹಾರವನ್ನು ನೀಡದೇ, ಕೇವಲ ಸೊಪ್ಪು ಮತ್ತು ಇತ್ಯಾದಿ ನೈಸರ್ಗಿಕ ಆಹಾರವನ್ನೇ ನೀಡಿದ್ದಾನೆ. ಇದರಿಂದ ಆಕೆಯ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದುಕೊಂಡಿದ್ದ.ಆಗಸ್ಟ್​​ 22ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಲೋಕನಾಯಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮಾದೇಶ್​ ಸ್ವತಃ ಹೆರಿಗೆ ಮಾಡಲು ಮುಂದಾಗಿದ್ದು, ಇದರಿಂದಾಗಿ‌ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಪೂಚಂಪಲ್ಲಿಯ ಕುನ್ನಿಯೂರುನಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿ YOUYUBE ನೋಡಿ ಹೆರಿಗೆ ಮಾಡಲು ಮುಂದಾಗಿದ್ದು, ಸಾವಿಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಹೀಗಾಗಿ ಆರೋಪಿಯ ಮೊಬೈಲ್​ ಫೋನ್​ಗಳನ್ನು ಪೊಲೀಸರು ಪರಿಶೀಲಿಸಲು ಮುಂದಾಗಿದ್ದಾರೆ.