Mangalore- ಬಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಮದ್ರಸ ಶಿಕ್ಷಕನಿಗೆ ಶಿಕ್ಷೆ

ಮಂಗಳೂರು: ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ  ಆರೋಪ ಎದುರಿಸುತ್ತಿದ್ದ ಮದ್ರಸ ಶಿಕ್ಷಕನಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಧರ್ಮಸ್ಥಳ- ಪುತ್ತೂರು ಕೆಎಸ್ಸಾರ್ಟಿಸಿ ಬಸ್ ಉಪ್ಪಿನಂಗಡಿ ಸಮೀಪದ ಇಳಂತಿಲ ಕಡವಿನಬಾಗಿಲು ಎಂಬಲ್ಲಿ ಹೋಗುತ್ತಿದ್ದ ವೇಳೆ ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದ . ಈ ಆರೋಪದಡಿ ಮೂಡಿಗೆರೆ ತಾಲೂಕಿನ ಮದ್ರಸ ಶಾಲೆಯ ಶಿಕ್ಷಕ ಮುಹಮ್ಮದ್ ಸೈಫುಲ್ಲಾ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ವಿರುದ್ಧ ಪೊಲೀಸರು ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ದೇವರಾಜ ಎಚ್. ಎಂ. ಅವರು ಆರೋಪಿ ಮುಹಮ್ಮದ್ ಸೈಫುಲ್ಲಾ ಅಪರಾಧಿ ಎಂದು ಘೋಷಿಸಿದ್ದು, ಆತನಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಬೆಳ್ತಂಗಡಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರು ಬೊಳುವಾರು ನಿವಾಸಿ ದಿವ್ಯರಾಜ್ ಹೆಗ್ಡೆ ವಾದಿಸಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu