-->

ಪುತ್ರನ ಅನಾರೋಗ್ಯ, ಆಸ್ಟ್ರೇಲಿಯಾ ಕಠಿಣ ಕಾನೂನಿಂದ ಮನನೊಂದು ಮಹಿಳೆ ಸಾವಿಗೆ ಶರಣು: ಕೊರಿಯೆರ್ ನಲ್ಲಿ ಬಂದ ಡೆತ್ ನೋಟ್ ನಲ್ಲಿತ್ತು ನೋವಿನ ವಿಚಾರ

ಪುತ್ರನ ಅನಾರೋಗ್ಯ, ಆಸ್ಟ್ರೇಲಿಯಾ ಕಠಿಣ ಕಾನೂನಿಂದ ಮನನೊಂದು ಮಹಿಳೆ ಸಾವಿಗೆ ಶರಣು: ಕೊರಿಯೆರ್ ನಲ್ಲಿ ಬಂದ ಡೆತ್ ನೋಟ್ ನಲ್ಲಿತ್ತು ನೋವಿನ ವಿಚಾರ


ಧಾರವಾಡ: ಪುತ್ರನ ಅನಾರೋಗ್ಯ ಆಸ್ಟ್ರೇಲಿಯಾದ ಕಠಿಣ ಕಾನೂನಿನಿಂದ ಬೇಸತ್ತ ಧಾರವಾಡ ಮೂಲದ ಮಹಿಳೆಯೊಬ್ಬರು ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದು ಸವದತ್ತಿಯ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧಾರವಾಡ ಸಪ್ತಾಪುರ ಮೂಲದ ಪ್ರಿಯದರ್ಶಿನಿ ಪಾಟೀಲ (40) ಮೃತಪಟ್ಟ ದುರ್ದೈವಿ. ಆಕೆಯ ಮೃತದೇಹ ಆ.20ರಂದು ಸವದತ್ತಿ ತಾಲೂಕಿನ ವಟ್ನಾಳ ಗ್ರಾಮದ ಬಳಿಯ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. 

ಪ್ರಿಯದರ್ಶಿನಿ ಪಾಟೀಲರ ಪತಿ ಲಿಂಗರಾಜ ಪಾಟೀಲ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರು. ದಂಪತಿ ಪುತ್ರ ಅಮರ್ತ್ಯ, ಪುತ್ರಿ ಅಪರಾಜಿತರೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಆದರೆ ಕೆಲ ವರ್ಷಗಳಿಂದ ಪುತ್ರ ಅಮರ್ತ್ಯ ಅನಾರೋಗ್ಯದಿಂದ ಬಳಲುತ್ತಿದ್ದ. ಇದರಿಂದ ನೊಂದಿದ್ದ ಪ್ರಿಯದರ್ಶಿನಿ, ಆಸ್ಪತ್ರೆಯ ವೈದ್ಯರ ವೈಫಲ್ಯವೆಂದು ದೂರು ದಾಖಲಿಸಿದ್ದರು. ಆದರೆ, ಆಸ್ಟ್ರೇಲಿಯಾ ಕಾನೂನಿನಂತೆ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪ ಇವರ ವಿರುದ್ಧವೇ ಕೇಳಿಬಂದಿತ್ತು. 

ಆದ್ದರಿಂದ ಆಸ್ಟ್ರೇಲಿಯಾ ಸರ್ಕಾರ ಇಬ್ಬರೂ ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಪೋಷಣೆ ಮಾಡುತ್ತಿತ್ತು. ಮಕ್ಕಳನ್ನು ಸ್ವದೇಶಕ್ಕೆ ಕರೆತರಲು ಪ್ರಿಯದರ್ಶಿನಿ ಪ್ರಯತ್ನಿಸಿದ್ದರು. ಆದರೆ ಆಸ್ಟ್ರೇಲಿಯಾದ ಕಠಿಣ ಕಾನೂನುಗಳ ವಿರುದ್ಧ ಹೋರಾಡಲಾಗದೆ ಅವರು ಸೋತಿದ್ದರು. ಜೊತೆಗೆ ಆಸ್ಟ್ರೇಲಿಯಾದ ಪೌರತ್ವ ಪಡೆದಿದ್ದ ಮಕ್ಕಳು ಅತಂತ್ರರಾದರು ಎಂಬ ಕೊರಗುತ್ತಿದ್ದರು. ಆದ್ದರಿಂದ ತವರುಮನೆಗೆ ಹೋಗುವುದಾಗಿ ಹೇಳಿ ಆ.18ರಂದು ಸಿಡ್ನಿಯಿಂದ ಅವರು ಹೊರಟಿದ್ದರು. ಬೆಂಗಳೂರಿಗೆ ಬಂದು ಅಲ್ಲಿಂದ ತವರು ಮನೆಗೆ ಹೋಗದೆ ಸವದತ್ತಿಗೆ ಹೋಗಿ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದಕ್ಕೂ ಮೊದಲು ಪ್ರಿಯದರ್ಶಿನಿ ತನ್ನಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಬ್ಯಾಗ್​ನಲ್ಲಿಟ್ಟು ತವರು ಮನೆಯ ವಿಳಾಸಕ್ಕೆ ಕೊರಿಯರ್ ಮಾಡಿದ್ದಾರೆ‌. ಅದರಲ್ಲಿ ಪತ್ರವೊಂದು ಪತ್ತೆಯಾಗಿದೆ. ಅವರು ಅದರಲ್ಲಿ ಆಸ್ಟ್ರೇಲಿಯಾದ ಕಾನೂನು ವ್ಯವಸ್ಥೆಯ ಬಗ್ಗೆಯೂ ವಿವರಿಸಿದ್ದಾರೆ. ಘಟನೆ ಕುರಿತು ಮೃತಳ ತಂದೆ ಎಸ್.ಎಸ್. ದೇಸಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪುತ್ರನ ಪಾಲನೆಯ ವಿಚಾರವಾಗಿ ಚಿಂತೆಗೀಡಾಗಿ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿವರಿಸಿದ್ದಾರೆ. ತಮಗಾಗಿರುವ ಅನ್ಯಾಯದ ವಿರುದ್ಧ ಭಾರತ ಸರ್ಕಾರದ ಮೂಲಕ ಕಾನೂನು ಹೋರಾಟ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಪತ್ನಿಯ ಆತ್ಮಹತ್ಯೆ ವಿಚಾರ ತಿಳಿದು ಆಸ್ಟ್ರೇಲಿಯಾದಿಂದ ಹೊರಟಿದ್ದ ಪತಿ ಲಿಂಗರಾಜ ಪಾಟೀಲ, ಗುರುವಾರ ಧಾರವಾಡ ತಲುಪಿದ್ದಾರೆ. ಅವರ ಆಗಮನಕ್ಕಾಗಿ ಕಾದಿದ್ದ ಕುಟುಂಬ ಸದಸ್ಯರು, ಪ್ರಿಯದರ್ಶಿನಿಯ ಅಂತ್ಯಸಂಸ್ಕಾರ ನೆರವೇರಿಸಿದರು. ಮೃತ ಪ್ರಿಯದರ್ಶಿನಿ ಮನೆಗೆ ತೆರಳಿದ್ದ ಕುಟುಂಬದ ಆಪ್ತ, ಮಾಜಿ ಮೇಯರ್ ಈರೇಶ ಅಂಚಟಗೇರಿ ಘಟನೆಯನ್ನು ಸಂಸದ ಪ್ರಲ್ಹಾದ ಜೋಶಿಯವರ ಗಮನಕ್ಕೆ ತರುತ್ತೇನೆ. ಅವರ ಮೂಲಕ ಆಸ್ಟ್ರೇಲಿಯಾದ ರಾಯಭಾರಿ ಕಚೇರಿಯನ್ನು ಸಂರ್ಪಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article