-->
1000938341
ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭ

ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭ


ಮಂಗಳೂರು: ಗೃಹಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಂತೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಳೆದೆರಡು ದಿನಗಳಿಂದ ಕಾರ್ಯಾರಂಭಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ಗೃಹ ಸಚಿವರಾದ ಬಳಿಕ ಮಂಗಳೂರಿಗೆ ಪ್ರಥಮ ಭೇಟಿಯ ಸಂದರ್ಭ ಡಾ.ಜಿ.ಪರಮೇಶ್ವರ್ ಅವರು ಆ್ಯಂಟಿ ಕಮ್ಯೂನಲ್ ವಿಂಗ್ ಅನ್ನು ಘೋಷಣೆ ಮಾಡಿದ್ದರು. ಅವರ ಸೂಚನೆಯನ್ವಯ ನಗರದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಅನ್ನು ಕಳೆದರೆಡು ದಿನಗಳಿಂದ ಕಾರ್ಯಾರಂಭಗೊಳಿಸಲಾಗಿದೆ. ಸಿಟಿ ಸ್ಪೆಷಲ್ ಬ್ರಾಂಚ್ (ಸಿ ಎಸ್ ಬಿ) ಇನ್ ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ತಂಡ ರಚಿಸಲಾಗಿದೆ. ಸಿ ಎಸ್ ಬಿ ಇನ್ ಸ್ಪೆಕ್ಟರ್, ಸಿಸಿಬಿ ಎಸಿಪಿ ಪಿ.ಎ.ಹೆಗ್ಡೆ ಹಾಗೂ ಐದು ಮಂದಿಯ ತಂಡ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಈ ಬಗ್ಗೆ ಏನೇ ವಿಚಾರಗಳಿದ್ದರೂ ನೇರವಾಗಿ ಪೊಲೀಸ್ ಕಮೀಷನರ್ ಗೆ ತಂಡ ವರದಿ ಸಲ್ಲಿಸಲಿದೆ ಎಂದರು.

ಆ್ಯಂಟಿ ಕಮ್ಯೂನಲ್ ವಿಂಗ್ ಎಲ್ಲಾ ಕೋಮು ಪ್ರಕರಣಗಳು ಹಾಗೂ ಆರೋಪಿಗಳ ಬಗ್ಗೆ ನಿಗಾವಹಿಸಲಿದೆ. ಅಲ್ಲದೆ ಈ ಪ್ರಕರಣಗಳ ಆರೋಪಿಗಳ ಕಾರ್ಯಾಚರಣೆಯ ಬಗ್ಗೆಯೂ ನಿಗಾವಹಿಸಲಿದೆ. ಕಳೆದ 10 ವರ್ಷಗಳಿಂದ ಮಂಗಳೂರು ನಗರದಲ್ಲಿ ನಡೆದ ಸುಮಾರು 200 ಪ್ರಕರಣಗಳ ಬಗ್ಗೆ ಈಗಾಗಲೇ ಗಮನಹರಿಸಲಾಗಿದೆ. ಹಿಂದಿನ ಎಲ್ಲಾ ಪ್ರಕರಣಗಳ ಸಂಬಂಧ ನ್ಯಾಯಾಲಯದ ವಿಚಾರಣೆಗಳ ಬಗ್ಗೆ ನಿಗಾವಹಿಸಲಿದ್ದು, ಸಂತ್ರಸ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದೆ ಎಂದರು.

ಕೋಮುದ್ವೇಷ ಮೂಡಿಸುವಂತ ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ, ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುವುದು, ದನಗಳವು, ಕೋಮುದ್ವೇಷ ಭಾವನೆಯ ಕೊಲೆ ಪ್ರಕರಣಗಳ ಬಗ್ಗೆ ಈ ತಂಡ ನಿಗಾವಹಿಸಲಿದೆ. ಯಾವುದೇ ಘಟನೆ ನಡೆದಾಗ ಆಯಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ಆ ಬಳಿಕ ಆ್ಯಂಟಿ ಕಮ್ಯೂನಲ್ ವಿಂಗ್ ಕ್ರಮ ಕೈಗೊಳ್ಳಲಿದೆ ಎಂದು ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದರು.

Ads on article

Advertise in articles 1

advertising articles 2

Advertise under the article