ಸ್ನೇಹಿತನೊಂದಿಗೆ ಸೇರಿ ಸಹೋದರಿಯನ್ನೇ ಹತ್ಯೆಗೈದು ದೇಹವನ್ನು ಪೀಸ್ ಮಾಡಿ ಸುಟ್ಟು ಹಾಕಿದ 13ವರ್ಷದ ಬಾಲಕಿ
Wednesday, May 24, 2023
ಪಾಟ್ನಾ: 13 ವರ್ಷದ ಬಾಲಕಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಪುಟ್ಟ ತಂಗಿಯನ್ನೇ ಹತ್ಯೆಗೈದು ದೇಹವನ್ನು ಪೀಸ್ ಪೀಸ್ ಮಾಡಿ ಆಸಿಡ್‌ನಿಂದ ಸುಟ್ಟು ಹಾಕಿರುವ ಆಘಾತಕಾರಿ ಕೃತ್ಯವೊಂದು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದವಳು 9 ವರ್ಷದ ಬಾಲಕಿಯಾಗಿದ್ದಾಳೆ. ಗ್ರಾಮಸ್ಥರಿಗೆ ಮೃತದೇಹದ ಅವಶೇಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಈ ಭಯಾನಕ ಕೃತ್ಯ ಬಹಿರಂಗಗೊಂಡಿದೆ. ಪೊಲೀಸರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಮೃತ ಬಾಲಕಿಯ ಸಹೋದರಿ ತಾನೇ ತನ್ನ ಗೆಳೆಯನೊಂದಿಗೆ ಸೇರಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. 'ತನ್ನ ತಂದೆ ದಿನಗೂಲಿ ಕಾರ್ಮಿಕನಾಗಿದ್ದಾರೆ. ಅವರು ಕೆಲಸದ ನಿಮಿತ್ತ ಬೇರೆ ಕಡೆಗೆ ಹೋಗುತ್ತಾರೆ. ಈ ವೇಳೆ ನಾನು ನನ್ನ ಗೆಳೆಯನೊಂದಿಗೆ ಏಕಾಂತದಲ್ಲಿ ಇರುವುದನ್ನು ತಂಗಿ ನೋಡಿದ್ದಾಳೆ. ಇದಕ್ಕೆ ಆಕೆ ವಿರೋಧವನ್ನು ವ್ಯಕ್ತಪಡಿಸಿದ್ದಾಳೆ. ಪರಿಣಾಮ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದೆ. ಅದರಂತೆ ಗೆಳೆಯನೊಂದಿಗೆ ಸೇರಿ ಕೊಲೆಗೈದು ಬಾಕ್ಸ್‌ನಲ್ಲಿ ಇರಿಸಿದ್ದೆವು. ಆದರೆ ಕೊಳೆತ ವಾಸನೆ ಹೆಚ್ಚಾಗಿದ್ದರಿಂದ ದೇಹವನ್ನು ತುಂಡು ತುಂಡು ಮಾಡಿ ಮನೆಯ ಹಿತ್ತಲಿನಲ್ಲಿ ಆಸಿಡ್ ಹಾಕಿ ಸುಟ್ಟು ಹಾಕಿದ್ದೇವೆ ಎಂದು ಆರೋಪಿ ಬಾಲಕಿ ಕೃತ್ಯವನ್ನು ಬಹಿರಂಗಪಡಿಸಿದ್ದಾಳೆ.