ನಾಮಪತ್ರ ವಾಪಸ್‌ ವದಂತಿ: ಅರುಣ್ ಪುತ್ತಿಲ ಶಾಕಿಂಗ್ ಪ್ರತಿಕ್ರಿಯೆ

ನಾಮಪತ್ರ ವಾಪಸ್‌ ವದಂತಿ: ಅರುಣ್ ಪುತ್ತಿಲ ಶಾಕಿಂಗ್ ಪ್ರತಿಕ್ರಿಯೆ 




ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರ ನೆಲೆಯಲ್ಲಿ ಸ್ಪರ್ಧೆ ನಡೆಸಿರುವ ಪುತ್ತೂರಿನ ಯುವ ಕೇಸರಿ ನಾಯಕ ಅರುಣ್ ಪುತ್ತಿಲ ಬಿಜೆಪಿ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. 

ಪುತ್ತಿಲ ಅವರ ಸ್ಪರ್ಧೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನೂ ಕಂಗೆಡಿಸಿದೆ. ಆದರೆ, ಚುನಾವಣಾ ನಾಮಪತ್ರದ ಕೊನೆಯ ದಿನ ಪುತ್ತೂರಿನಲ್ಲಿ ವದಂತಿ ಹರಡಿತ್ತು. 

ಪುತ್ತಿಲ ಅವರು ನಾಮಪತ್ರ ವಾಪಸ್ ಪಡೆದುಕೊಂಡರು ಎಂದು ಎಲ್ಲೆಡೆ ಪುಕಾರು ಹಬ್ಬಿಸಲಾಯಿತು. ಈ ಬಗ್ಗೆ ಸ್ವತಃ ಪುತ್ತಿಲ ಅವರೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ತಾನು ಚುನಾವಣಾ ಸ್ಪರ್ಧಾ ಕಣದಿಂದ ಹಿಂದೆ ಸರಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಯಾವುದೇ ಕಾರಣಕ್ಕೂ ತಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ. ಪುತ್ತೂರ ಕ್ಷೇತ್ರದ ಪ್ರತಿ ಮನೆಗೂ ಭೇಟಿ ನೀಡಿ ಮತಯಾಚನೆ ನಡೆಸುತ್ತೇನೆ ಎಂದು ಅವರು ಹೇಳಿದ್ದಾರೆ.

ತಮಗೆ ಸಂಘ ಪರಿವಾರದ ಕಡೆಯಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿರುವ ಪುತ್ತಿಲ, ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ತಮ್ಮ ಪರ ನಿಲ್ಲಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.