ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಎಳೆದೊಯ್ದು ಅತ್ಯಾಚಾರ, ಕೊಲೆಗೈದ ಕಿರಾತಕ: ಬೆಂಗಳೂರಿನಲ್ಲೊಂದು ಅಮಾನುಷ ಘಟನೆ


ಬೆಂಗಳೂರು: ಕಾಲೇಜಿಗೆ ಹೊರಟಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಪರಿಚಯದ ಯುವಕನೇ ಎಳೆದೊಯ್ದು ಅತ್ಯಾಚಾರವೆಸಗಿ, ಕೊಲೆಗೈದಿರುವ ಆತಂಕಕಾರಿ ಘಟನೆ ಬೆಂಗಳೂರಿನ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಗರ ರಸ್ತೆ ನಿವಾಸಿ, ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಕೊಲೆಗೈದಿರುವ ಆರೋಪದಡಿ ವೆಂಕಟೇಶ್ ಎಂಬಾತನನ್ನು ಬಂಧಿಸಲಾಗಿದೆ.

ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯ ಮೊದಲನೆ ತರಗತಿಗೆ ಹಾಜರಾಗಲು ಮಾ.24ರಂದು ಬೆಳಗ್ಗೆ 8:30ಕ್ಕೆ ಮನೆಯಿಂದ ಕಾಲೇಜಿಗೆ ಹೊರಟಿದ್ದಾಳೆ. ಈ ವೇಳೆ ಆಕೆಗೆ ಪರಿಚಯಸ್ಥನಾಗಿದ್ದ ಬಸಪ್ಪನಪಾಳ್ಯದ ವೆಂಕಟೇಶ್ ಆಕೆಯನ್ನು ಕಾಲೇಜು ಮುಗಿದ ಬಳಿಕ ಬಲವಂತವಾಗಿ ಭೈರಸಂದ್ರ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಆ ಬಳಿಕ ಆಕೆಯನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.

ಘಟನೆಯ ಬಳಿಕ ಸ್ವತಃ ಆರೋಪಿ ವೆಂಕಟೇಶ್, ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ ತಮ್ಮ ಪುತ್ರಿ ತಲೆಸುತ್ತಿ ಬಿದ್ದಿದ್ದು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಹೇಳಿದ್ದಾನೆ. ಪರಿಣಾಮ ಗಾಬರಿಗೊಂಡು ಅವರು ಆಸ್ಪತ್ರೆಗೆ ತೆರೆಳಿದಾಗ ಆಕೆಯ ಕಾಲುಗಳ ಬಳಿ ರಕ್ತಸ್ರಾವವಾಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಆಕೆಯ ಮೇಲೆ ಹಲ್ಲೆ ನಡೆಸಿರುವ ಗುರುತುಗಳು ಇದ್ದವು ಎಂದು ತಿಳಿಸಿದ್ದಾರೆ. ಆದ್ದರಿಂದ ಸಂತ್ರಸ್ತೆಯ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.

ಈ ಹಿಂದೆಯೇ ವೆಂಕಟೇಶ್ ತನ್ನನ್ನು ಸಂಪರ್ಕಿಸಿ ಪ್ರೀತಿಸುತ್ತಿದ್ದೇನೆ ಎಂದು ಕತೆಕಟ್ಟಿದ್ದಾನೆ. ಆದರೆ, ಇದೆಲ್ಲ ಬೇಡ, ಓದಿನ ಕಡೆ ಗಮನ ನೀಡುವಂತೆ ಸಲಹೆ ನೀಡಿದ್ದೇವು. ಜತೆಗೆ, ಮಗಳಿಗೆ ಮೊಬೈಲ್ ನೀಡುವುದನ್ನು ನಿಲ್ಲಿಸಿದ್ದೇವು. ಆದರೂ, ಆಕೆಯನ್ನು ಸಂಪರ್ಕಿಸಿ ಬಲವಂತವಾಗಿ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ‌. ಆದ್ದರಿಂದ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಆರೋಪಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಯುವತಿಯ ತಂದೆ ಮನವಿ ಮಾಡಿದರು.
BREAKING NEWS
Loading latest news...
Join our WhatsApp Channel Powered By : Online Pudu