ಓದಿದ್ದು 8ನೇ ತರಗತಿ,‌ ಆದರೆ ಐಎಎಸ್ ಅಧಿಕಾರಿಯೆಂದು ವೈದ್ಯೆಯನ್ನೇ ಬಲೆಗೆ ಕೆಡವಿರುವ ಈತನ ಹಿಸ್ಟ್ರಿ ಕಂಡು ದಂಗಾದ ಪೊಲೀಸರು



ನವದೆಹಲಿ: ಈತ ಓದಿದ್ದು ಕೇವಲ 8ನೇ ತರಗತಿ. ಆದರೆ, ಐಪಿಎಸ್ ಅಧಿಕಾರಿ ಎಂದು ಬಿಂಬಿಸಿಕೊಂಡು ಸುಮಾರು ಒಂದು ಡಜನ್ ಮಹಿಳೆಯರನ್ನು ವಂಚನೆಗೈದು, ಲಕ್ಷಾಂತರ  ರೂ. ಹಣ ಪಂಗನಾಮ ಹಾಕಿದ್ದಾನೆ. ಇದೀಗ ಈ ನಯವಂಚಕನನ್ನು ದೆಹಲಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.

ವಿಕಾಸ್ ಗೌತಮ್ ವಂಚಕ ಎಂದು ಗುರುತಿಸಲಾಗಿದೆ. ಈತ ವಿಕಾಸ್ ಯಾದವ್ ಎಂಬ ಹೆಸರಿನಲ್ಲಿ ಟ್ವಿಟರ್, ಫೇಸ್‌ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಯರಿಗೆ ಬಲೆ ಬೀಸಿ, ವಂಚನೆಗೈಯುವುದೇ ಈತನ ಕಾಯಕ. ಅಲ್ಲದೆ, ತಾನೋರ್ವ ಸರ್ಕಾರಿ ಅಧಿಕಾರಿ ಎಂದು ಬಿಂಬಿಸಲು ಕೆಂಪುಗೂಟದ ಸರ್ಕಾರಿ ಕಾರು ಮುಂಭಾಗ ನಿಂತು ತೆಗೆದಿರುವ ಫೋಟೋವನ್ನು ಪ್ರೊಫೈಲ್ ಫೋಟೋವಾಗಿ ಬಳಸಿದ್ದ.

ಈತ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ವೈದ್ಯೆಯನ್ನು ವಂಚಿಸಿದ್ದ. ಇವಬ್ಬರೂ ಆನ್‌ಲೈನ್‌ನಲ್ಲಿ ಚಾಟಿಂಗ್ ಆರಂಭಿಸಿದ್ದರು. ವೈದ್ಯೆಗೆ ಮಂಕುಬೂದಿ ಎರಚಿ ಸಂಪೂರ್ಣ ನಂಬಿಕೆ ಗಳಿಸಿದ ಆರೋಪಿ, 25 ಸಾವಿರ ರೂ. ಹಣ ಪಡೆದುಕೊಂಡಿದ್ದ. ಆದರೆ ಆತ ನಕಲಿ ಅಧಿಕಾರಿ ಹಾಗೂ ವಂಚಕ ಎಂಬುದು ಯಾವಾಗ ತಿಳಿಯಿತೋ ಆಕೆ ಪೊಲೀಸ್ ಠಾಣೆಯ ಮೆಟ್ಟಿಲೇರಲು ನಿರ್ಧರಿಸಿದಳು. ಆದರೆ, ಆತ ತನಗೆ ರಾಜಕಾರಣಿಗಳ ಸಂಪರ್ಕವಿದೆ ಎಂದು ಹೇಳಿ ವೈದ್ಯೆಗೆ ಬೆದರಿಕೆಯೊಡ್ಡಿದ್ದಾನೆ.

ವೈದ್ಯೆ ಯಾವುದೇ ಬೆದರಿಕೆಗೆ ಕ್ಯಾರೇ ಎನ್ನದೆ ಪೊಲೀಸ್ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಹಾಯದಿಂದ ಆರೋಪಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಆತ ಐಪಿಎಸ್ ಅಧಿಕಾರಿ ವೇಷದಲ್ಲಿ ಸುಮಾರು ಒಂದು ಡಜನ್ ಮಹಿಳೆಯರಿಗೆ ವಂಚಿಸಿದ್ದು, ಲಕ್ಷಾಂತರ ರೂ. ಹಣ ಸುಲಿಗೆ ಮಾಡಿದ್ದು ತಿಳಿದುಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದಾರೆ.

ಅಂದಹಾಗೆ ಆರೋಪಿ ವಿಕಾಸ್ ಗೌತಮ್ ಮಧ್ಯ ಪ್ರದೇಶದ ಗ್ವಾಲಿಯರ್ ನಿವಾಸಿ. ಈತ ಯಾವುದೇ ಐಎಎಸ್ ಅಧಿಕಾರಿಯಲ್ಲ. ಬದಲಾಗಿ 8ನೇ ತರಗತಿ ಪಾಸ್ ಮಾಡಿದ ಬಳಿಕ ಐಟಿಐನಲ್ಲಿ ವೆಲ್ಡಿಂಗ್ ಕೋರ್ಸ್ ಮಾಡಿದ್ದನೆಂದು ದೆಹಲಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ವಿಕಾಸ್ ಗೌತಮ್, ದೆಹಲಿಯ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳ ಪ್ರಮುಖ ಕೇಂದ್ರವಾದ ಉತ್ತರ ದೆಹಲಿಯ ಮುಖರ್ಜಿ ನಗರದ ರೆಸ್ಟೋರೆಂಟ್‌ನಲ್ಲಿಯೂ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಬಹುಶಃ ಅವರನ್ನು ನೋಡಿ ಪ್ರಭಾವಗೊಂಡು ಅಲ್ಲಿಂದ ಐಪಿಎಸ್ ಅಧಿಕಾರಿಯಂತೆ ನಟಿಸುವ ಆಲೋಚನೆ ಮಾಡಿದನು ಎಂದು ತಿಳಿದುಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu