-->

ಎರಡು ವರ್ಷಗಳ ಬಳಿಕ ಹೊಸ ಅವತಾರದೊಂದಿಗೆ ಕಾಣಿಸಿಕೊಂಡ 'ಡ್ರೋನ್ ಪ್ರತಾಪ್': ಬಗೆಬಗೆಯಾಗಿ ಕಾಲೆಳೆದ ನೆಟ್ಟಿಗರು

ಎರಡು ವರ್ಷಗಳ ಬಳಿಕ ಹೊಸ ಅವತಾರದೊಂದಿಗೆ ಕಾಣಿಸಿಕೊಂಡ 'ಡ್ರೋನ್ ಪ್ರತಾಪ್': ಬಗೆಬಗೆಯಾಗಿ ಕಾಲೆಳೆದ ನೆಟ್ಟಿಗರು


ಬೆಂಗಳೂರು: ತಾನೊಬ್ಬ ಯುವ ವಿಜ್ಞಾನಿ, ಡ್ರೋನ್​ ತಯಾರಿಸಿದ್ದೇನೆ ಎಂದು ಹೇಳಿ ವ್ಯಾಪಕ ಸುದ್ದಿಯಲ್ಲಿದ್ದು, ಬಳಿಕ ವಿವಾದಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್‌ 2 ವರ್ಷಗಳ ಬಳಿಕ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ.

ಡ್ರೋನ್ ತಯಾರಿಸಿದ್ದೇನೆ ಎಂದು ಸುಳ್ಳು ಹೇಳಿ ಪೊಲೀಸ್ ವಿಚಾರಣೆಯನ್ನೂ ಎದುರಿಸಿದ್ದ ಡ್ರೋನ್​ ಪ್ರತಾಪ್​ ಬಳಿಕ ನಾಪತ್ತೆಯಾಗಿದ್ದರು. ಇದೀಗ ಮತ್ತೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಮತ್ತೇನೋ ನೂತನವಾಗಿ ಪ್ರಾರಂಭಿಸುತ್ತಿದ್ದೇನೆಂದು ಮುನ್ಸೂಚನೆ ನೀಡಿದ್ದಾರೆ. ಟೇಬಲ್​ ಮೇಲೊಂದು ಲ್ಯಾಪ್​ಲಾಪ್​ ಇಟ್ಟುಕೊಂಡಿರುವ ಡ್ರೋನ್ ಪ್ರತಾಪ್ ಅದಕ್ಕೆ ಡಾಟಾ ಕೇಬಲ್​ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ. ಎರಡು ಕೈಗಳಿಗೆ ಹಳದಿ ಬಣ್ಣದ ಗ್ಲೌಸ್ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸೋಲ್ಡರಿಂಗ್ ಗೇರ್​ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. 


ಟೇಬಲ್​ ಮೇಲೆ ಇನ್ನಷ್ಟು ಇಲೆಕ್ಟ್ರಾನಿಕ್​ ಉಪಕರಣಗಳಿದ್ದು, ಟೇಬಲ್​ನ ಒಂದು ಬದಿಯಲ್ಲಿ ಡ್ರೋನ್​ ಕ್ಯಾಮೆರಾದ ಅರ್ಧ ಚಿತ್ರ ಕಾಣುತ್ತದೆ. ಈ ಬಾರಿ ಡ್ರೋನ್​ ಪ್ರತಾಪ್​ ಯಾವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿಲ್ಲ. ಆದರೆ, 'ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ' ಎಂಬ ಅಡಿಬರಹ ನೀಡಿದ್ದಾರೆ. 

ಸದ್ಯ ಡ್ರೋನ್ ಪ್ರತಾಪ್​ ಹೊಸ ಅವತಾರದ ಫೋಟೋ ಭಾರಿ ವೈರಲ್​ ಆಗುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಇನ್​ಸ್ಟಾಗ್ರಾಂ ಖಾತೆಯಲ್ಲಿ ಕಾಮೆಂಟ್​ ಮೂಲಕ ಕಾಲೆಳೆಯುತ್ತಿದ್ದಾರೆ. 'ಈ ಬಾರಿ ಯಾವ ರಾಕೆಟ್​ ಹಾರಿಸ್ತೀರಾ ಅಣ್ಣಾ' ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ಕೇಳಿದ್ದಾರೆ. ಮತ್ತೊಬ್ಬರು 'ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ' ಎಂದಿದ್ದಾರೆ. 'ಕಾಗೆ ಪ್ರತಾಪ' ಎಂದು ಇನ್ನೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ. 'ಅಣ್ಣಾ ನನ್ನ ಇಯರ್​ ಫೋನ್​ನಲ್ಲಿ ಒಂದು ಬದಿ ಕೇಳುತ್ತಿಲ್ಲ, ರಿಪೇರಿ ಮಾಡಿ ಕೊಡು', 'ಸೋಲ್ಡರಿಂಗ್​ ಮಾಡೋಕೆ ಈ ರೀತಿಯ ಬಿಲ್ಡಪ್​ ಬೇಕಾ?', 'ಅಣ್ಣನ ಮರು ವಿಶ್ವರೂಪ', 'ಬ್ರೊ ತುರ್ತಾಗಿ ಶಿವಮೊಗ್ಗದಿಂದ ವಿಜಯಪುರಕ್ಕೆ ಒಂದು ಬ್ಲಡ್​ ಬಾಟಲ್​ ಕಳುಹಿಸಬೇಕಿತ್ತು. 10 ನಿಮಷದಲ್ಲಿ ಕಳುಹಿಸಬೇಕು. ನಿಮ್ಮ ಡ್ರೋಣ್​ ಕಳುಹಿಸಿ, ನಮಗೆ ಸಹಾಯವಾಗುತ್ತೆ' ಎಂಬಂತಹ ಬಗೆಬಗೆಯ ಕಾಮೆಂಟ್​ಗಳ ಮೂಲಕ ಡ್ರೋನ್​… ಅಲ್ಲ ಅಲ್ಲ ಕಾಗೆ ಪ್ರತಾಪ್​ನನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.


Ads on article

Advertise in articles 1

advertising articles 2

Advertise under the article