-->
ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್ ಪತ್ತೆಯೇ ಇಲ್ಲ: ನಾಳೆ ಕೋರ್ಟ್ ತೀರ್ಪು

ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್ ಪತ್ತೆಯೇ ಇಲ್ಲ: ನಾಳೆ ಕೋರ್ಟ್ ತೀರ್ಪು

ಕೊಟ್ಟಾಯಂ: ಕೇರಳ ರಾಜ್ಯದ ಕಂಜಿರಪಲ್ಲಿ  ಅಂಗಡಿಯೊಂದರಲ್ಲಿ ಪೊಲೀಸ್ ಅಧಿಕಾರಿ ಶಿಹಾಬ್ ಎಂಬಾತ ಮಾವಿನ ಹಣ್ಣುಗಳನ್ನು ಕಳವುಗೈದಿರುವ ಪ್ರಕರಣವು ಕೋರ್ಟ್‌ನಲ್ಲಿ ಇತ್ಯರ್ಥವಾಗುವ ಸಾಧ್ಯತೆಯಿದೆ. 

ಮಾವಿನಹಣ್ಣು ಮಾರಾಟಗಾರ ಕಂಜಿರಪಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಮುಂದುವರಿಸಲು ಅವರು ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ನಾಳೆ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಲಿದೆ. 

ಇಡುಕ್ಕಿ ಎಆರ್ ಕ್ಯಾಂಪ್‌ನ ಪೊಲೀಸ್ ಪೇದೆ ಪಿ.ವಿ.ಶಿಹಾಬ್ ಸೆ.30ರಂದು ಕಂಜಿರಪಲ್ಲಿಯ ಹಣ್ಣಿನ ಅಂಗಡಿಗೆ ನುಗ್ಗಿ ಮಾವಿನ ಹಣ್ಣುಗಳನ್ನು ಕಳವುಗೈದಿದ್ದ. 

ಈ ಪ್ರಕರಣ ಬಯಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಶಿಹಾಬ್‌ನನ್ನು ಪೊಲೀಸರು ಈವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಶಿಹಾಬ್ ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಅಕ್ಟೋಬರ್ 3ರಂದು ಕೇರಳ ಡಿಜಿಪಿ, ಆರೋಪಿ ಶಿಹಾಬ್‌ನನ್ನು ಅಮಾನತುಗೊಳಿಸಿದ್ದಾರೆ.

ಶಿಹಾಬ್ ಅಪರಾಧ ಹಿನ್ನೆಲೆಯನ್ನು ಸಹ ಹೊಂದಿದ್ದಾನೆ.‌ಈತ 2019 ರಲ್ಲಿ ಕಂಜಿರಪಲ್ಲಿಯ ಜನರಲ್ ಹಾಸ್ಪಿಟಲ್‌ನ ಮಹಿಳಾ ಉದ್ಯೋಗಿಯೊಬ್ಬರಿಗೆ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವಿದೆ. ಅಲ್ಲದೆ, ಜೈಲಿನಿಂದ ಹೊರಬಂದ ಬಳಿಕ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ ಶಿಹಾಬ್ ವಿರುದ್ಧ ಮುಂಡಕ್ಕಯಂ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಈತ ಪೊಲೀಸ್ ಕೆಲಸಕ್ಕೆ ಸೇರುವ ಮುನ್ನ 2007ರಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪದ ಮೇಲೆಯೂ ಶಿಹಾಬ್ ವಿರುದ್ಧ ಕೇಸು ದಾಖಲಾಗಿತ್ತು . ಅಲ್ಲದೇ ಗಣಿಗಾರಿಕೆ ಮಾಫಿಯಾಗಳ ಸಂಪರ್ಕ , ಶಬರಿಮಲೆಯಲ್ಲಿ ವಿಐಪಿ ದರ್ಶನ ಆಮಿಷವೊಡ್ಡಿ ಭಕ್ತರಿಂದ ಹಣ ವಸೂಲಿ , ಕರ್ತವ್ಯವಿಲ್ಲದ ವೇಳೆ ಸಮವಸ್ತ್ರ ಧರಿಸಿ ಸ್ಥಳೀಯರಿಂದ ಹಣ ವಸೂಲಿ ಮುಂತಾದ ಪ್ರಕರಣಗಳ ಕುರಿತು ಈತನ ವಿರುದ್ಧ ಹಲವು ದೂರುಗಳು ಬಂದಿದ್ದರೂ ಉನ್ನತ ಮಟ್ಟದ ಪ್ರಭಾವದಿಂದ ಯಾವುದೇ ಕ್ರಮ ಕೈಗೊಂಡಿಲ್ಲ . ಇಷ್ಟೊಂದು ಅಪರಾಧದ ಹಿನ್ನೆಲೆ ಇದ್ದರೂ ಈತನಿಗೆ ಅದು ಹೇಗೆ ಕೆಲಸ ಸಿಕ್ಕಿತು ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article