ಮಾಜಿ ಸಚಿವ ಪಾಲೇಮಾರ್‌ ನೇತೃತ್ವದ ವಿಕಾಸ ಕಾಲೇಜು ಕೆನರಾ ಶಿಕ್ಷಣ ಸಂಸ್ಥೆ ಪಾಲು..!

ಮಾಜಿ ಸಚಿವ ಪಾಲೇಮಾರ್‌ ನೇತೃತ್ವದ ವಿಕಾಸ ಕಾಲೇಜು ಕೆನರಾ ಶಿಕ್ಷಣ ಸಂಸ್ಥೆ ಪಾಲು..!





ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಮಾಜಿ ಸಚಿವ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಪಾಲೇಮಾರ್ ನೇತೃತ್ವದ ಟ್ರಸ್ಟ್ ನಡೆಸುತ್ತಿರುವ ವಿಕಾಸ್‌ ಕಾಲೇಜನ್ನು ಖರೀದಿಸಿದೆ.



ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಶಿಕ್ಷಣ ಸಂಸ್ಥೆ ವಿಕಾಸ್ ಕಾಲೇಜನ್ನು ಯಶಸ್ವೀಯಾಗಿ ನಡೆಸಿಕೊಂಡು ಬರುತ್ತಿದ್ದು, ಕೆನರಾ ಶಿಕ್ಷಣ ಸಂಸ್ಥೆ ಈ ಕಾಲೇಜನ್ನು ಖರೀದಿಸುವ ಮೂಲಕ ಮತ್ತೊಂದು ಮೈಲುಗಲ್ಲು ಕ್ರಮಿಸಿದೆ.



ಜೆ. ಕೃಷ್ಣ ಪಾಲೆಮಾರ್ ನೇತೃತ್ವದ ವಿಕಾಸ್ ಶಿಕ್ಷಣ ಸಂಸ್ಥೆಯನ್ನು ಕೆನರಾ ಶಿಕ್ಷಣ ಸಂಸ್ಥೆ 82 ಕೋಟಿ ರೂಗಳಿಗೆ ಖರೀದಿಸಿದೆ ಎಂದು ತಿಳಿದುಬಂದಿದೆ.



ಈಗಾಗಲೇ ಖರೀದಿ ಒಪ್ಪಂದ ನಡೆದಿದ್ದು, ಈ ಸಂದರ್ಭದಲ್ಲಿ ಸುಮಾರು 5 ಕೋಟಿ ರೂ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ. ಒಂದು ಲೆಕ್ಕ ಪ್ರಕಾರ, ಮೇರಿಹಿಲ್‌ನಲ್ಲಿ ಏರ್‌ಪೋರ್ಟ್‌ ರೋಡ್ ಪಕ್ಕದಲ್ಲಿ ಇರುವ ಸುಮಾರು 3.80 ಎಕರೆ ಪ್ರದೇಶದಲ್ಲಿ ವಿಕಾಸ್ ಕಾಲೇಜು ಮತ್ತು ಅದರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಇದು ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.



ಈ ಸುದ್ದಿಯನ್ನು ದೃಢಪಡಿಸಿರುವ ವಿಶ್ವಾಸಾರ್ಹ ಮೂಲಗಳು , ಆದರೆ ಇದು ಎರಡು ಟ್ರಸ್ಟ್‌ಗಳ ನಡುವಿನ ಖರೀದಿ ಮತ್ತು ಮಾರಾಟ ವ್ಯವಹಾರ ಎಂದು ತಿಳಿಸಿವೆ.