ತ್ಯಾಜ್ಯ ನಗರವಾದ ಸ್ಮಾರ್ಟ್ ಸಿಟಿ ಮಂಗಳೂರು: ಆರು ದಿನವಾದರೂ ತಲೆಕೆಡಿಸಿಕೊಳ್ಳದ ಪಾಲಿಕೆ!!!
ತ್ಯಾಜ್ಯ ನಗರವಾದ ಸ್ಮಾರ್ಟ್ ಸಿಟಿ ಮಂಗಳೂರು: ಆರು ದಿನವಾದರೂ ತಲೆಕೆಡಿಸಿಕೊಳ್ಳದ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ವಿಲೇವಾರಿ ಸ್ಥಗಿತಗೊಂಡಿದೆ. ಆರು ದಿನಗಳಿಂದ ತ್ಯಾಜ್ಯ ವಿಲೇವಾರಿ ನಡೆಯದಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಮಾತ್ರ ಗುಮ್ಮನಂತೆ ಸುಮ್ಮನೆ ಕುಳಿತಿದೆ.
ನಗರದ ಜನರು ಮಾತ್ರ ಈ ಸಂದಿಗ್ಧ ಪರಿಸ್ಥಿತಿಯಿಂದ ಹೈರಾಣಾಗಿದ್ದು, ಮನೆಯಲ್ಲಿ ತ್ಯಾಜ್ಯದ ರಾಶಿಯಿಂದ ತಲೆಗೆ ಕೈಹೊತ್ತಿದ್ದಾರೆ.
ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಪಡೆದಿರುವ ಮಂಗಳೂರು ತ್ಯಾಜ್ಯ ನಗರಿಯಾಗಿ ಪರಿವರ್ತನೆಯಾಗಿದೆ. ವಿಂಗಡಣೆಯಾಗಿರುವ ಕಸದ ವಿಲೇವಾರಿ ಸಮಸ್ಯೆಯಾಗಿದೆ.
ತ್ಯಾಜ್ಯ ವಿಲೇವಾರಿ ನೌಕರರ ಪ್ರತಿಭಟನೆ ಇದಕ್ಕೆ ಕಾರಣ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.
ಕಸ ಎಲ್ಲೆಂದರಲ್ಲಿ ಎಸೆದರೆ ಅಪರಾಧ. ನಾವು ತ್ಯಾಜ್ಯ ಕರ (ಟ್ಯಾಕ್ಸ್) ಕಟ್ಟಿದ್ದರೂ ಮನೆ ಬಾಗಿಲಿನಿಂದ ಕಸ ತೆಗೆಯುತ್ತಿಲ್ಲ. ನಮಗೆ ಏಕೆ ಈ ಶಿಕ್ಷೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಪರಿಸ್ಥಿತಿ ಹೀಗೆ ಮುಂದುವರಿದರೆ, ಪಾಲಿಕೆಯ ಕಚೇರಿ ಮುಂದೆ ಕಸವನ್ನು ರಾಶಿ ಹಾಕುವ ಬಗ್ಗೆ ನಾಗರಿಕರು ಚಿಂತನೆ ನಡೆಸುತ್ತಿದ್ದಾರೆ.
ಪರಿಸ್ಥಿತಿ ಕೈಮೀರುವ ಮುನ್ನ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಒಳಿತು.