ಮಂಡ್ಯ: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನು ಮಕ್ಕಳ ಮುಂಭಾಗವೇ ಥಳಿಸಿ ಹತ್ಯೆಗೈದ ಪಾಪಿ ಪತಿ!
Thursday, July 7, 2022
ಮಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಪತ್ನಿ ಬಲಿಯಾಗಿದ್ದಾಳೆ. ವಿಪರ್ಯಾಸವೆಂದರೆ ಆಕೆಯ ಇಬ್ಬರು ಮಕ್ಕಳ ಮುಂಭಾಗವೇ ಆಕೆಯ ಪತಿ ಅಮಾನುಷವಾಗಿ ಹತ್ಯೆಯಾಗಿದ್ದಾಳೆ. ಈ ಆತಂಕಕಾರಿ ಘಟನೆ ಶ್ರೀರಂಗಪಟ್ಟಣದ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯೋಗಿತಾ(27) ಪತಿಯಿಂದಲೇ ಹತ್ಯೆಯಾಗಿರುವ ದುರ್ದೈವಿ ಯುವತಿ.
ಈಕೆಯ ಪತಿ ರವಿ ಮತ್ತೊಬ್ಬಾಕೆಯೊಂದಿಗೆ ಅಕ್ರಮವಾಗಿ ಸಂಬಂಧ ಇರಿಸಿಕೊಂಡಿದ್ದ. ಇದೇ ಕಾರಣಕ್ಕೆ ಪತಿ - ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೆ ಮನೆ ಬಿಟ್ಟು ಹೋಗುವಂತೆ ರವಿ ಪದೇಪದೇ ಹಿಂಸಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಇವರ ಜಗಳಕ್ಕೆ ಅಂತ್ಯ ಹಾಡಲು ಮಾಡಿ ಊರಿನ ಮುಖಂಡರು ರಾಜಿ ಪಂಚಾಯಿತಿಯನ್ನೂ ಮಾಡಿದ್ದರು. ಆದರೆ ಮನಸ್ತಾಪ ಹೆಚ್ಚಾಗುತ್ತಲೇ ಹೋಗಿ ಜಗಳ ನಿಲ್ಲಲೇ ಇಲ್ಲ. ನಿನ್ನೆ ರಾತ್ರಿಯೂ ಇದೇ ರೀತಿ ಜಗಳ ಆರಂಭವಾಗಿದೆ. ಆಗ ಮಕ್ಕಳ ಮುಂಭಾಗವೇ ಪತ್ನಿಗೆ ಚೆನ್ನಾಗಿ ಥಳಿಸಿದ ಪತಿ ರವಿ ಆಕೆಯನ್ನು ಕೋಣೆಗೆ ಎಳೆದೊಯ್ದಿದ್ದಾನೆ.
ಆಗ ಹೆದರಿದ ಮಕ್ಕಳು ಹೋಗಿ ನೆರೆಹೊರೆಯವರಿಗೆ ಹೇಳಿದ್ದಾರೆ. ಅವರು ಮನೆಗೆ ಆಗಮಿಸಿದ ವೇಳೆ ಯೋಗಿತಾ ಹೆಣವಾಗಿ ಬಿದ್ದಿದ್ದಾಳೆ. ರವಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಮಕ್ಕಳಿಬ್ಬರೂ ತಬ್ಬಲಿಗಳಾಗಿದ್ದಾರೆ. ಯೋಗಿತಾ ಹೆತ್ತವರ ಆಕ್ರಂದನ ಮುಗಿಲು ಮುಟ್ಡಿದೆ. ಇದೀಗ ಅರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರವಿಯ ಪತ್ತೆಗೆ ಬಲೆ ಬೀಸಿದ್ದಾರೆ.