ಬೆಂಗಳೂರು: ಬಿಬಿಎಂಪಿ ತ್ಯಾಜ್ಯ ಲಾರಿಯ ವೇಗಕ್ಕೆ ಬಿದ್ದಂತಿಲ್ಲ ಕಡಿವಾಣ; ಪತ್ನಿ ಸಾವು, ಪತಿ ಗಂಭೀರ
Sunday, July 10, 2022
ಬೆಂಗಳೂರು: ಬಿಬಿಎಂಪಿ ಕಸದ ಲಾರಿಗಳ ಅಪಘಾತಕ್ಕೆ ಕಡಿವಾಣ ಬೀಳುವಂತೆ ಕಾಣುತ್ತಿಲ್ಲ. ಶನಿವಾರ ಮತ್ತೊಂದು ಜೀವವನ್ನು ಕಸದ ಲಾರಿ ಬಲಿ ಪಡೆದಿದೆ. ನಾಗರಬಾವಿ ಬಳಿ ಅತ್ಯಂತ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಆಗಮಿಸಿದ ತ್ಯಾಜ್ಯ ಲಾರಿ ಬೈಕ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಸವಾರೆ ಪತ್ನಿ ಮೃತಪಟ್ಟರೆ, ಬೈಕ್ ಸವಾರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈಸೂರು ರಸ್ತೆ ಕಸ್ತೂರ್ಬಾ ನಗರದ ನಿವಾಸಿ ವಿಜಯಕಲಾ(37) ಮೃತಪಟ್ಟ ಮಹಿಳೆ. ಇವರ ಪತಿ ಯೋಗೀಂದ್ರ(41) ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ.
ನಾಗರಬಾವಿ ರಿಂಗ್ ರೋಡ್ ಸರ್ವೀಸ್ ರಸ್ತೆಯಲ್ಲಿ ಬೆಳಗ್ಗೆ 9.30 ವೇಳೆಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಬೈಕ್ ನಿಂದ ಬಿದ್ದ ಮಹಿಳೆಯ ಮೇಲೆ ಲಾರಿ ಚಲಾಯಿಸಿ ಆಕೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಿತ್ತಾದರೂ, ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಕೆಯ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬ್ಯಾಟರಾಯನ ಪುರದಲ್ಲಿ ಪ್ರಕರಣ ದಾಖಲಾಗಿದೆ.