ಪುತ್ರಿಗಾಗಿ ಮಾಡಿರುವ ಈ ಕೃತ್ಯದಿಂದ ಅಪ್ಪ ಜೈಲುಪಾಲಾದ!

ಕಾಕಿನಾಡ (ಆಂಧ್ರಪ್ರದೇಶ): ತಂದೆಯೊಬ್ಬ ಮಕ್ಕಳಿಗಾಗಿ, ಅವರ ಶ್ರೇಯಸ್ಸಿಗಾಗಿ ಏನೇನೋ ಮಾಡುತ್ತಾನೆ. ಕಷ್ಟಪಟ್ಟು ದುಡಿದು ಅವರನ್ನು ಬೆಳೆಸುತ್ತಾನೆ. ಆದರೆ ಇಲ್ಲೊಬ್ಬ ತಂದೆ ಮಗಳಿಗಾಗಿ ಮಾಡಿರುವ ಕೃತ್ಯದಿಂದ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು..‌ ಈತ ಪುತ್ರಿಗಾಗಿ ದ್ವಿಚಕ್ರ ವಾಹನ ಕ್ಷಣಮಾತ್ರದಲ್ಲಿ ಎಗರಿಸಿ ಮಾಯವಾಗ್ತಿದ್ದ. ಕದ್ದ ಬೈಕ್​ಗಳನ್ನು ಮಾರುವುದು ಈತನಿಗೆ ಬೆಣ್ಣೆಯಿಂದ ಕೂದಲು ತೆಗೆದಷ್ಟೇ ಸಲೀಸು. ಹೀಗೆ ಕದ್ದ ಬೈಕ್ ಗಳ ಸಂಖ್ಯೆ ಒಂದೆರಡಲ್ಲ. ಈತ ಐನಾತಿ ಕಳ್ಳ ಇಲ್ಲಿಯವರೆಗೆ ಕದ್ದ ದ್ವಿಚಕ್ರ ವಾಹನಗಳ ಸಂಖ್ಯೆ 107. ಅವುಗಳನ್ನು ಕದ್ದು ಮಾರಾಟ ಮಾಡಿದ್ದಾನೆ. ಕೊನೆಗೂ ಈ ಐನಾತಿ ಕಿಲಾಡಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ ಮೇಲೆ ಈ ಕುತೂಹಲಕಾರಿ ಸಂಗತಿ ಬಯಲಾಗಿದೆ.


ಎಲೇಶ್ವರದ ನಾಡಿಗಟ್ಲ ಕೃಷ್ಣ ಎಂಬ ಈ ಕಳ್ಳನಿಗೆ ಇಬ್ಬರು ಪುತ್ರಿಯರು. ಅವರಲ್ಲೊಬ್ಬ ಪುತ್ರಿಗೆ ಕಿವಿ ಕೇಳಿಸದು, ಮಾತೂ ಬಾರದು. ಪುತ್ರಿಯ ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗಳಿಗೆ ಅಲೆದಲೆದು ಲಕ್ಷಾಂತರ ರೂ. ಈತ ಖರ್ಚು ಮಾಡಿದ್ದಾನೆ. ಹೀಗೆ ಕೈಯಲ್ಲಿದ್ದ ಹಣವೆಲ್ಲವನ್ನೂ ಕಳೆದುಕೊಂಡ ಕೃಷ್ಣನು ಧೈರ್ಯ ಮಾತ್ರ ಕಳೆದುಕೊಳ್ಳಲಿಲ್ಲ. ಇಂಥಹ ಸಂದರ್ಭ ಆತನಿಗೆ ನೆನಪಾಗಿದ್ದೇ ತಾನು ಹಿಂದೊಮ್ಮೆ ತೆಲುಗು ಸಿನಿಮಾ ನೋಡಿದ್ದು ನೆನಪಾಗಿದೆ. ಈ ಸಿನಿಮಾದಲ್ಲಿ ಮಕ್ಕಳ ಚಿಕಿತ್ಸೆಗೋಸ್ಕರ ನಾಯಕ, ಶ್ರೀಮಂತರ ಮನೆ ಕಳ್ಳತನ ಮಾಡುವುದನ್ನು ತೋರಿಸಿದ್ದಾರೆ. ಈ ಪುಣ್ಯಾತ್ಮ ಅದನ್ನೇ ಚಾಚೂ ತಪ್ಪದೆ ಪಾಲಿಸುವ ದಾರಿ ಹಿಡಿದಿದ್ದಾನೆ.

ಹೀಗೆ, ಪುತ್ರಿಯ ಚಿಕಿತ್ಸೆಗೋಸ್ಕರ ಈತ 14 ತಿಂಗಳಲ್ಲಿ ಒಟ್ಟು 107 ದ್ವಿಚಕ್ರ ವಾಹನಗಳನ್ನು ಕದ್ದಿದ್ದಾನೆ. ಕಳೆದ ಎಪ್ರಿಲ್ ತಿಂಗಳಿನಲ್ಲಿ ಕೃತ್ಯವನ್ನು ಆರಂಭಿಸಿದ್ದಾನೆ. ಈತ ಆಂಧ್ರದ ಪೂರ್ವ ಗೋದಾವರಿ, ಕಾಕಿನಾಡ, ಕೋನಸೀಮಾ, ಪಶ್ಚಿಮ ಗೋದಾವರಿ, ವಿಶಾಖಪಟ್ಟಣ, ಸೀತಾರಾಮರಾಜ್​ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬೈಕುಗಳನ್ನು ಕದ್ದಿದ್ದಾನೆ. ಕದ್ದ ಬೈಕ್​​ಗಳನ್ನು ಜಗ್ಗಂಪೇಟೆ ಮಂಡಲದ ವೀರಬಾಬು ಎಂಬಾತನಿಗೆ ಮಾರಾಟ ಮಾಡುತ್ತಿದ್ದ. ಇದೀಗ ಬಂಧನಕ್ಕೊಳಗಾದ ನಾಡಿಗಟ್ಲ ಕೃಷ್ಣನನ್ನು ವಿಚಾರಿಸಿದಾಗ, ಆತ ಅಸಲಿ ಕಥೆ ವಿವರಿಸಿದ್ದಾನೆ.!