ಶಾಪಿಂಗ್ ಮಾಲ್ ನ ಬಹುಮಹಡಿಯ ಕಟ್ಟಡದಿಂದ ಬಿದ್ದ ಪ್ರೇಮಿಗಳು: ಯುವತಿ ಸಾವು, ಯುವಕ ಗಾಯಗೊಂಡು ಪ್ರಾಣಾಪಾಯದಿಂದ ಪಾರು

ಬೆಂಗಳೂರು: ನಗರದ ಶಾಪಿಂಗ್ ಕಾಂಪ್ಲೆಕ್ಸ್​ ಬಹುಮಹಡಿಯ ಮೇಲಿನಿಂದ ಪ್ರೇಮಿಗಳಿಬ್ಬರು ಬಿದ್ದ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟು, ಯುವಕ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬ್ರಿಗೇಡ್ ರಸ್ತೆಯಲ್ಲಿನ ಫಿಫ್ತ್ ಅವೆನ್ಯೂ ಕಟ್ಟಡದಲ್ಲಿ ನಡೆದಿದೆ. 

ಆಂಧ್ರಪ್ರದೇಶ ಮೂಲದ ಕ್ರಿಸ್​ ಪೀಟರ್ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದರೆ, ಬೆಂಗಳೂರಿನ ಕಾಕ್ಸ್​​ ಟೌನ್​ ನಿವಾಸಿ ಯುವತಿ ಲಿಯಾ ಮೃತಪಟ್ಟಿದ್ದಾರೆ. 


ಯುವಕ ಹೈದರಾಬಾದ್ ಮೂಲದವನಾಗಿದ್ದು, ಆತನ ಕುಟುಂಬದವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎಚ್ಎಎಲ್​ 2ನೇ ಹಂತದ ನಿವಾಸಿಯಾಗಿರುವ ಈತ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ. ಯುವಕ - ಯುವತಿ ಇಬ್ಬರೂ ಕ್ಲಾಸ್​ಮೇಟ್. ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆಂದು ಬಂದಿದ್ದ ಯುವಕ ಕ್ರಿಸ್ ಪೀಟರ್, ಯುವತಿ ತನ್ನ ಪ್ರೇಯಸಿ ಎಂಬುದಾಗಿ ಪೊಲೀಸರ ಬಳಿ ತಿಳಿಸಿದ್ದಾನೆ. 

ಗಾಯಾಳು ಯುವಕ ನಿನ್ನೆ ಮಧ್ಯಾಹ್ನ ಸುಮಾರಿಗೆ ತನ್ನ ಏಳೆಂಟು ಸ್ನೇಹಿತರೊಂದಿಗೆ ಬ್ರಿಗೇಡ್ ರಸ್ತೆಗೆ ಬಂದಿದ್ದರು. ಸ್ನೇಹಿತರು ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ ನಿಂತುಕೊಂಡಿದ್ದರು. ಆಗ ಈ ಪ್ರೇಮಿಗಳಿಬ್ಬರು ಎರಡನೇ ಮಹಡಿಗೆ ಹೋಗಿದ್ದಾರೆ. ಅಲ್ಲಿ ಕಿಟಕಿಯ ಗಾಜಿಗೆ ಒರಗಿದ್ದಾರೆ. ಅದು ಕಳಚಿ ಬಿದ್ದ ಪರಿಣಾಮ ಮೇಲಿನಿಂದ ಹೊರಕ್ಕೆ ಪ್ಯಾಸೇಜ್​ನಲ್ಲಿ ಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪಾಲಕರು ಆಕಸ್ಮಿಕ ಸಾವು ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. 

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಿದ್ದಾರೆ. ಈ ಕಿಟಕಿಯ ಗಾಜು ಕಳಚಿಹೋದ್ದರಿಂದ ಅವರು ಕೆಳಕ್ಕೆ ಬಿದ್ದಿದ್ದರು ಎಂದು ಶಂಕಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu