-->

ವಿಶೇಷ ಚೇತನ ಹೆಣ್ಣು ಮಕ್ಕಳು ಹುಟ್ಟಿದ್ದರೆಂದು ಪತ್ನಿಗೆ ನಿರಂತರ ಕಿರುಕುಳ: ಪತಿ, ಅತ್ತೆ, ನಾದಿನಿಗೆ ಒಂದು ವರ್ಷ ಜೈಲು ಶಿಕ್ಷೆ

ವಿಶೇಷ ಚೇತನ ಹೆಣ್ಣು ಮಕ್ಕಳು ಹುಟ್ಟಿದ್ದರೆಂದು ಪತ್ನಿಗೆ ನಿರಂತರ ಕಿರುಕುಳ: ಪತಿ, ಅತ್ತೆ, ನಾದಿನಿಗೆ ಒಂದು ವರ್ಷ ಜೈಲು ಶಿಕ್ಷೆ

ಬೆಂಗಳೂರು: ವಿಶೇಷ ಚೇತನ ಹೆಣ್ಣು ಮಕ್ಕಳು ಹುಟ್ಟಿದ್ದರೆಂಬ ಕಾರಣಕ್ಕೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಬೆಂಕಿ ಹಚ್ಚಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಆತನ ತಾಯಿ ಹಾಗೂ ಸೋದರಿಗೆ ಹೈಕೋರ್ಟ್ ಒಂದು ವರ್ಷ ಜೈಲು ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಆರೋಪಿಗಳನ್ನು ಪ್ರಕರಣದಿಙದ  ಖುಲಾಸೆ ಮಾಡಿರುವ ಮಂಡ್ಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಶಿಕ್ಷೆ ವಿಧಿಸುವಂತೆ ಕೋರಿ ಮಳವಳ್ಳಿ ತಾಲೂಕಿನ ಕಿರುಗಾವಲು ಠಾಣೆಯ ಪೊಲೀಸರು  ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿರುವ ನ್ಯಾ.ಬಿ.ವೀರಪ್ಪ ಹಾಗೂ ನ್ಯಾ.ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಈ ಪೀಠ ತನ್ನ ತೀರ್ಪಿನಲ್ಲಿ, ಮೃತ ಹೇಮಲತಾ ಇಬ್ಬರು ವಿಶೇಷ ಚೇತನ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರೆಂಬ ಕಾರಣಕ್ಕೆ ಪತಿ, ಅತ್ತೆ ಹಾಗೂ ನಾದಿನಿ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು  ಎಂಬುದು ಪ್ರಾಸಿಕ್ಯೂಷನ್‌ ಸಾಕ್ಷ್ಯಗಳಿಂದ ರುಜುವಾತಾಗಿದೆ. ಪತ್ನಿಯನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿದ್ದ ಪತಿ ಮಾದೇಶ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದೆ. ಅಲ್ಲದೇ, ಕಿರುಕುಳ ನೀಡಿರುವ ಅಪರಾಧಕ್ಕೆ ಆರೋಪಿಗಳಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ದಂಡದ ಮೊತ್ತವನ್ನು ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವಂತೆ ಆದೇಶಿಸಿದೆ.

ಮಾದೇಶ ಹಾಗೂ ಹೇಮಲತಾ ದಂಪತಿಗೆ ವಿವಾಹವಾದ 6 ವರ್ಷಗಳ ಬಳಿಕ ಇಬ್ಬರು ವಿಶೇಷ ಚೇತನ ಹೆಣ್ಣು ಮಕ್ಕಳು ಜನಿಸಿದ್ದರು. ಇದು ಪತಿ, ಅತ್ತೆ ಹಾಗೂ ನಾದಿನಿಗೆ ಅಸಮಾಧಾನ ಉಂಟು ಮಾಡಿತ್ತು. ಪರಿಣಾಮ, ಅವರು ಹೇಮಲತಾಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. 2012ರ ನವೆಂಬರ್ 28ರ ಸಂಜೆ ಪತಿಯಿಂದ ಹೇಮಲತಾ ಮನೆ ಖರ್ಚಿಗೆ ಹಣ ಕೇಳಿದ್ದರು. ಇದಕ್ಕೆ ಗಲಾಟೆ ಮಾಡಿದ್ದ ಪತಿ ಮಾದೇಶ ಪತ್ನಿ ಹೇಮಲತಾ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದ. ಜೊತೆಗೆ, ಕೂಲಿ ಮಾಡಿ ಸಂಸಾರ ನಡೆಸುವಂತೆ ಸೂಚಿಸಿದ್ದ. ಬಳಿಕ, ಅತ್ತೆ ಹಾಗೂ ನಾದಿನಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹೇಮಲತಾ ಮೇಲೆ ಸೀಮೆ ಎಣ್ಣೆ ಎರಚಿ ಬೆಂಕಿ ಹಚ್ಚಿದ್ದರು.

ಬಳಿಕ ಪತಿ ಬೆಂಕಿ ಆರಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದರೂ, ಚಿಕಿತ್ಸೆ ಫಲಿಸದೆ ಹೇಮಲತಾ ಮೃತಪಟ್ಟಿದ್ದರೆಂದು ಪೊಲೀಸರು ಆರೋಪಿಸಿದ್ದರು. ಹಾಗೆಯೇ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 498ಎ, 302 ಅಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮಂಡ್ಯ ಜಿಲ್ಲಾ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. 

ಹೇಮಲತಾ ಸಾವಿಗೆ ಮುನ್ನ ನೀಡಿರುವ ಹೇಳಿಕೆಯಲ್ಲಿನ ಗೊಂದಲಗಳು ಹಾಗೂ ಸಾಕ್ಷಿದಾರರ ಪ್ರತಿಕೂಲ ಹೇಳಿಕೆಗಳಿಂದಾಗಿ ಕೋರ್ಟ್ ಆರೋಪಿಗಳನ್ನು ಖುಲಾಸೆ ಮಾಡಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು ಹೈಕೋರ್ಟ್​ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಸಾವಿಗೆ ಸಾಕ್ಷ್ಯಗಳು ಸ್ಪಷ್ಟವಿಲ್ಲದಿದ್ದರೂ, ಕಿರುಕುಳ ನೀಡಿರುವುದು ಸ್ಪಷ್ಟ ಎಂದು ಅಭಿಪ್ರಾಯಪಟ್ಟು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article