-->

MRPL ನೇಮಕಾತಿಯಲ್ಲಿ ಸ್ಥಳೀಯರಿಗೆ ಮತ್ತೆ ವಂಚನೆ: ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

MRPL ನೇಮಕಾತಿಯಲ್ಲಿ ಸ್ಥಳೀಯರಿಗೆ ಮತ್ತೆ ವಂಚನೆ: ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

MRPL ನೇಮಕಾತಿಯಲ್ಲಿ ಸ್ಥಳೀಯರಿಗೆ ಮತ್ತೆ ವಂಚನೆ: ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ





MRPL ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಮತ್ತೊಮ್ಮೆ ವಂಚನೆ, ಧರ್ಮಗಳ ಪರದೆ ಇಳಿಬಿಟ್ಟು ನಡೆಸಿದ್ದಾರೆ ಆಳುವವರು ಮೋಸ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ಹೊರಹಾಕಿದ್ದಾರೆ.


ಈ ಬಗ್ಗೆ ಅವರು ನೀಡಿದ ವಿಸ್ತೃತ ಪ್ರಕಟಣೆ ಇಲ್ಲಿದೆ;


2021 ಎಪ್ರಿಲ್ ನಲ್ಲಿ ನಡೆದ 233 ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಪೂರ್ತಿ ಹೊರಗಿಟ್ಟು ಉತ್ತರ ಭಾರತೀಯರಿಗೆ ಆದ್ಯತೆ ನೀಡಿದ್ದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಮಾತ್ರ ಅಲ್ಲದೆ ಇಡೀ ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆಗ ದಕ್ಷಿಣ ಕನ್ನಡಕ್ಕೆ ಎರಡು, ಕರ್ನಾಟಕಕ್ಕೆ 11 ಹುದ್ದೆಗಳಷ್ಟೆ ದೊರಕಿತ್ತು.





ಈ ಸಂದರ್ಭದಲ್ಲಿ ಭುಗಿಲೆದ್ದ ಆಕ್ರೋಶದ ತೀವ್ರತೆಗೆ ಬೆಚ್ಚಿ ಬಿದ್ದ ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ತಾಲೂಕಿನ ಬಿಜೆಪಿ ಶಾಸಕರುಗಳು ರಾತ್ರೋರಾತ್ರಿ MRPL ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. "ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಲೋಕಲ್‌ನವರಿಗೆ ಆದ್ಯತೆ ನೀಡಿ ಮತ್ತೆ ಹೊಸದಾಗಿ ನೇಮಕಾತಿ ನಡೆಸಲಾಗುವುದು" ಎಂಬ ಹಸಿ ಸುಳ್ಳು ಭರವಸೆಗಳನ್ನು ನೀಡಿ ಜನರ ಆಕ್ರೋಶದ ದಿಕ್ಕನ್ನು ತಪ್ಪಿಸಲು ಯಶಸ್ವಿಯಾದರು. MRPL ಅದೇ ಹಳೆಯ ನೇಮಕಾತಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ ಸ್ಥಳೀಯ ಯುವಜನರ ಕನಸುಗಳನ್ನು ಭಗ್ನಗೊಳಿಸಿತು.


ಈಗ ಇನ್ನೊಂದು ಸುತ್ತಿನ ವಂಚನೆ ನಡೆಯುತ್ತಿದೆ ಅಂದು ನೇಮಕಾತಿ ಆದೇಶ ಪಡೆದಿದ್ದ ಉತ್ತರ ಭಾರತೀಯರಲ್ಲಿ 38 ಅಭ್ಯರ್ಥಿಗಳು ವಿವಿಧ ಕಾರಣಗಳಿಂದ MRPL ನ ಉದ್ಯೋಗ ನೇಮಕಾತಿ ಪತ್ರವನ್ನು ಸ್ವೀಕರಿಸಲಿಲ್ಲ. ಇನ್ನು 20 ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಪೂರ್ತಿಗೊಳಿಸಿ ಕಂಪೆನಿಯ ಒಳಗಡೆ ಸೇರಿಕೊಂಡರೂ ಇನ್ನಷ್ಟು ಉತ್ತಮ ಉದ್ಯೋಗ ದೊರಕಿದ ಹಿನ್ನಲೆಯಲ್ಲಿ MRPL ಗೆ ರಾಜಿನಾಮೆ ನೀಡಿದ್ದಾರೆ.


ಆ ಕಾರಣ, ಈಗ ನೇಮಕಾತಿಯಾದ 233 ಹುದ್ದೆಗಳ ಪೈಕಿ 58 ಹುದ್ದೆಗಳು ಖಾಲಿ ಇವೆ. ಇಷ್ಟಾದರೂ MRPL ಹಾಗೂ ನಮ್ಮ ಸಂಸದರು ಶಾಸಕರು ಸ್ಥಳೀಯ ನಿರುದ್ಯೋಗಿಗಳಿಗೆ ಕೊಡಿಸಿ ತಮ್ಮ ಪಾಪ ತೊಳೆದುಕೊಳ್ಳುತ್ತಾರೆ ಅಂತ ಭಾವಿಸಿದರೆ ಅದೂ ಇಲ್ಲ.

ಖಾಲಿ ಬಿದ್ದ ಆ 58 ಹುದ್ದೆಗಳನ್ನೂ ಹೊರ ರಾಜ್ಯಗಳ ಪಾಲಾಗಿಸಲು ಕಂಪೆನಿ ಹೊಸ ದಾರಿ ಹುಡುಕಿದೆ. ಕಂಪೆನಿ ಪ್ರಕಾರ ನೇಮಕಾತಿ ಪ್ರಕ್ರಿಯೆಯಲ್ಲಿ‌ ಭಾಗವಹಿಸಿದ್ದ ಸಾವಿರಾರು ಅಭ್ಯರ್ಥಿಗಳ ಪಟ್ಟಿಯನ್ನೇ ಶಾರ್ಟ್ ಲಿಸ್ಟ್ ಮಾಡಲಾಗಿದೆ. ನೇಮಕಾತಿ ಪರೀಕ್ಷೆಯಲ್ಲಿ 233 ರ ನಂತರದ Rank ಪಡೆದ 58 ಜನರನ್ನೇ ಆಯ್ಕೆ ಮಾಡಲು ಸುಲಭದ ದಾರಿ ಹಿಡಿದಿದೆ. ಆ ನಿಯಮದಂತೆ ನೇಮಕಾತಿ ಪ್ರಕ್ರಿಯೆಯನ್ನು ಕದ್ದು ಮುಚ್ಚಿ ಪೂರ್ತಿಗೊಳಿಸುತ್ತಿದೆ.


ಇದು ತುಳುನಾಡಿನ, ಕರುನಾಡಿನ ನಿರುದ್ಯೋಗಿ ಯುವಜನರಿಗೆ ಮತ್ತೊಂದು ಮಾರಕ ಹೊಡೆತವಾಗಿದೆ. ಈ ವಿಚಾರ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ‌ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ್ ಕಾಮತ್ ಮತ್ತಿತರರಿಗೆ ತಿಳಿದಿಲ್ಲ ಎಂದು ಭಾವಿಸಬೇಡಿ. MRPL ಒಳಗೆ ಒಂದು ಹುಲ್ಲು ಕಡ್ಡಿಯೂ ಇವರ ಗಮನಕ್ಕೆ ಬಾರದೆ ಅಲ್ಲಾಡುವುದಿಲ್ಲ. 2021ರಲ್ಲಿ ಹೋರಾಟ ಭುಗಿಲೆದ್ದಾಗ "ಇನ್ನು ಮುಂದೆ ನೇಮಕಾತಿಯ ಎಲ್ಲ ಪ್ರಕ್ರಿಯೆ ಸ್ಥಳೀಯ ಶಾಸಕರುಗಳ ಗಮನಕ್ಕೆ ಬಂದೇ ನಡೆಯಲಿದೆ" ಎಂದು ಇವರೇ ಘೋಷಿಸಿದ್ದರು. ಆದರೆ, ಈಗ ಎಲ್ಲ ಗೊತ್ತಿದ್ದರೂ ಜನರ ಗಮನ ಬೇರೆಡೆ ಸೆಳೆದು ಈ ಅಕ್ರಮ ನೇಮಕಾತಿ ನಡೆಸಲು ಹಸಿರು ನಿಶಾನೆ ತೋರಿಸಿದ್ದಾರೆ.


ಸಮವಸ್ತ್ರ, ಹಲಾಲ್, ಜಟ್ಕಾ, ಭಿನ್ನ ಧರ್ಮದ ವ್ಯಾಪಾರಿಗಳಿಗೆ ಬಹಿಷ್ಕಾರ ಎಂಬ ಆಳುವವರೇ ಹುಟ್ಟು ಹಾಕಿರುವ ವಿವಾದದ ನಡುವೆ MRPL ಸಹಿತ ಉದ್ಯಮಗಳಲ್ಲಿ ನಮ್ಮ ಉದ್ಯೋಗವಕಾಶಗಳು ಕಂಡವರ ಪಾಲಾಗುತ್ತಿರುವುದು ನಮ್ಮ ನಾಡಿನ ಯುವಜನರಿಗೆ ಗೊತ್ತೇ ಆಗುತ್ತಿಲ್ಲ.




ಈಗಲಾದರು ಎಚ್ಚೆತ್ತುಕೊಳ್ಳಿ. ಖಾಲಿ ಇರುವ 58 ಹುದ್ದೆಗಳನ್ನು ಶಾರ್ಟ್ ಲಿಸ್ಟ್ ಅಡಿ ಹೊರ ರಾಜ್ಯಗಳ ಹಳೆಯ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು MRPL ಕೈ ಬಿಡಲು, ಸ್ಥಳೀಯ ಯುವಜನರನ್ನೇ ಆಯ್ಕೆ ಮಾಡಲು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಆಗ್ರಹಿಸಿ‌ ಧ್ವನಿ ಎತ್ತಿ. ಡಾ. ಸರೋಜಿನಿ ಮಹಿಷಿ ವರದಿ ಈಗಲಾದರು ಜಾರಿಗೆ ಬರಲಿ. ಅದಕ್ಕಾಗಿ ನಳಿನ್ ಕುಮಾರ್ ಕಟೀಲ್ ಸಹಿತ ದಕ ಉಡುಪಿ ಜಿಲ್ಲೆಯ ಸಂಸದರು, ಶಾಸಕರನ್ನು ನೇರವಾಗಿ ಪ್ರಶ್ನಿಸಿ. 

Ads on article

Advertise in articles 1

advertising articles 2

Advertise under the article