-->
ಕ್ರಿಪ್ಟೊ ಕರೆನ್ಸಿ ಲಾಭದ ನೆಪದಲ್ಲಿ 40 ಕೋಟಿ ರೂ. ದೋಖಾ: ನಾಲ್ವರು ಅರೆಸ್ಟ್

ಕ್ರಿಪ್ಟೊ ಕರೆನ್ಸಿ ಲಾಭದ ನೆಪದಲ್ಲಿ 40 ಕೋಟಿ ರೂ. ದೋಖಾ: ನಾಲ್ವರು ಅರೆಸ್ಟ್

ಬೆಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಅಧಿಕ ಲಾಭಾಂಶವನ್ನು ನೀಡುವುದಾಗಿ ಸಾವಿರಾರು ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು 40 ಕೋಟಿ ರೂ.ಗೂ ಮಿಕ್ಕಿ ಹಣ ವಂಚನೆ ಆರೋಪದಲ್ಲಿ ಶೇರ್​ಹ್ಯಾಶ್ ಸಂಸ್ಥೆಯ ನಿರ್ದೇಶಕ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಭಾರತ ಮೂಲದ ಶೀತಲ್ ಬಾಸ್ತವುದ್, ಜಬಿವುಲ್ಲಾ ಖಾನ್, ಇಮ್ರಾನ್ ರಿಯಾಜ್, ರೆಹಮತ್ ಉಲ್ಲಾ ಖಾನ್ ಬಂಧಿತ ವಂಚಕರು.

ಈ ನಾಲ್ವರು ಆರೋಪಿಗಳು 44 ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದ 15 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ. ಇದಲ್ಲದೆ 1 ಕೆಜಿ 650 ಗ್ರಾಂ ಚಿನ್ನ, 78 ಲಕ್ಷ ರೂ. ನಗದು, 44 ಡಿಎಸ್​ಸಿ ಟೋಕನ್​ಗಳು ಹಾಗೂ ಐದು ಸೀಲ್ ಗಳನ್ನು ಸೀಜ್ ಮಾಡಲಾಗಿದೆ. 2021ರ ಲಾಕ್​ಡೌನ್ ಸಂದರ್ಭ ಎಸ್​ಎಂಎಸ್ ಹಾಗೂ ವಾಟ್ಸ್​ಆ್ಯಪ್ ಗ್ರೂಪ್​ಗಳ ಮೂಲಕ ಶೇರ್​ಹ್ಯಾಶ್ ಗ್ರೂಪ್​ನಲ್ಲಿ ಹಣ ಹೂಡಿಕೆ ಮಾಡುವಂತೆ ಆರೋಪಿಗಳು ಸಾರ್ವಜನಿಕರನ್ನು ಪ್ರೇರೇಪಿಸುತ್ತಿದ್ದರು. 

ಶೇರ್ ಹ್ಯಾಶ್ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ ಹೆಲಿಯಮ್ ಕ್ರಿಪ್ಟೋ ಟೋಕನ್ (ಎಚ್​ಎನ್​ಟಿ) ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಜನರಿಂದ ಹಣ ಹೂಡಿಕೆ ಮಾಡಿದ್ದರು. ಜತೆಗೆ ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡುವ ಭರವಸೆಯನ್ನು ಕೊಟ್ಟಿದ್ದರು. ಇದನ್ನು ನಂಬಿದ ಸಾರ್ವಜನಿಕರು ಶೇರ್​ಹ್ಯಾಶ್ ಆಪ್ ಇನ್​ಸ್ಟಾಲ್ ಮಾಡಿಕೊಂಡು ತಮ್ಮ ಖಾತೆಯನ್ನು ತೆರೆದಿದ್ದರು. ಸಾರ್ವಜನಿಕರ ಉಳಿತಾಯ ಬ್ಯಾಂಕ್ ಖಾತೆಯಿಂದ ಯುಪಿಐ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಬೆಂಗಳೂರು ಹಾಗೂ ವಿವಿಧ ರಾಜ್ಯಗಳಲ್ಲಿ ನೊಂದಣಿಯಾಗಿರುವ ಕೋಟಾಟಾ ಟೆಕ್ನಾಲಜಿ ಪ್ರೖೆ.ಲಿ., ಸಿರಲೀನ್ ಟೆಕ್ ಸೊಲ್ಯೂಷನ್ಸ್ ಪ್ರೖೆ ಲಿ., ನೀಲಿನ್ ಇನ್ಪೋಚ್ ಪ್ರೖೆ.ಲಿ., ಮೋಲ್ಟ್ರೆಸ್ ಎಕ್ಸೀಮ್ ಪ್ರೖೆ.ಲಿ., ಕ್ರಾಂಪ್ಟಿಂಗ್ಟನ್ ಟೆಕ್ನಾಲಜಿ ಪ್ರೖೆ.ಲಿ. ಕಂಪನಿಗಳ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. 

ಸಾರ್ವಜನಿಕರು, ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವ ದಾಖಲೆಗಳ ಮಾಹಿತಿಯನ್ನು ಕಲೆ ಹಾಕಿರುವ ಸಿಸಿಬಿ ಪೊಲೀಸರು, ಆರೋಪಿಗಳ ಜಾಡು ಪತ್ತೆಹಚ್ಚಿ ಬಂಧಿಸಿದೆ. ತಾಂತ್ರಿಕ ತನಿಖೆ ನಡೆಸಿದಾಗ ಒಟ್ಟು 40 ಕೋಟಿ ರೂ.ಗೂ ಅಧಿಕ ಹಣ ವಂಚನೆಯಾಗಿರುವುದು ತಿಳಿದು ಬಂದಿದೆ. ಈ ಪ್ರಕರಣದ ಕಿಂಗ್​ಪಿನ್ ವಿದೇಶಿ ಪ್ರಜೆ ಎಂಬ ಸುಳಿವು ದೊರಕಿದೆ. ಆತನ ಸೂಚನೆಯ ಮೇರೆಗೆ ಆರೋಪಿಗಳು ಈ ಕೃತ್ಯವನ್ನು ಎಸಗಿದ್ದಾರೆಂದು ಹೇಳಲಾಗಿದೆ. ಇದೀಗ ಆತನ ಬಂಧನವಾದಲ್ಲಿ ಗ್ರಾಹಕರಿಂದ ಪಡೆದಿರುವ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದು ತಿಳಿದುಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 


ಕ್ರಿಪ್ಟೋ ಕರೆನ್ಸಿ ಮೈನಿಂಗ್ ಮಾಡಲು ಡಿವೈಸ್ ಕೊಡುತ್ತೇವೆ. ಆ ಡಿವೈಸ್ ಮೂಲಕ ನೀವೇ ಮನೆಗಳಲ್ಲಿ ಮೈನ್ ಮಾಡಿ ಹೆಚ್ಚಿನ ಲಾಭಾಂಶ ಪಡೆದುಕೊಳ್ಳಬಹುದು. ಕ್ರಿಪ್ಟೋ ಮೈನಿಂಗ್​ನಲ್ಲಿ ಹಣ ಹೂಡಿಕೆ ಮಾಡುವವರು ಡಿವೈಸ್ ಅನ್ನು ಬಾಡಿಗೆಗೆ ಪಡೆಯುತ್ತಾರೆ. ಲಾಭಾಂಶದಲ್ಲಿ ಕಮಿಷನ್ ಕೊಡುತ್ತಾರೆ. ನಮ್ಮ ಕಂಪನಿಗಳು ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡುತ್ತದೆ. ಇದಕ್ಕಾಗಿ ಹಗಲಿರುಳು ಸಾವಿರಾರು ಜನ ವಹಿವಾಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಗಳು ನಂಬಿಸಿದ್ದರು. ಆರಂಭದಲ್ಲಿ 5 ಸಾವಿರ ರೂ. ಹೂಡಿಕೆ ಮಾಡಿದರೆ ಪ್ರತಿದಿನ 49 ರೂ. ಲಾಭಾಂಶ ಕೊಡುತ್ತಿದ್ದರು. ಈ ಬಗ್ಗೆ ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡುತ್ತಿದ್ದರು. ಇದಕ್ಕಾಗಿ 900ಕ್ಕೂ ಅಧಿಕ ವಾಟ್ಸ್​ಆಪ್ ಗ್ರೂಪ್​ಗಳನ್ನು ಆರೋಪಿಗಳ ಸೃಷ್ಟಿಸಿದ್ದರು.

Ads on article

Advertise in articles 1

advertising articles 2

Advertise under the article