ಎಡಗೈಯಲ್ಲಿ ಊಟ ಮಾಡಿದ್ದಾಳೆಂದು ವಧುವನ್ನೇ ತೊರೆದು ಹೋದ ವರ

ದಾಂಡೇಲಿ: ಮದುವೆಯ ದಿನದಂದು ಎಡಗೈಯಲ್ಲಿ ಊಟ ಮಾಡಿದ್ದಾಳೆಂದು ವರ ಸೇರಿದಂತೆ ಆತನ ಕಡೆಯವರೆಲ್ಲ ವಧುವನ್ನೇ  ತೊರೆದು ಹೋದ ಘಟನೆ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದಿದೆ.

ಪರಿಣಾಮ ಉದ್ರಿಕ್ತ ಸ್ಥಳೀಯರು ವರನ ಕಡೆಯವರನ್ನು ತಕ್ಷಣ ತಡೆದು ನಿಲ್ಲಿಸಿದ್ದಾರೆ. ಬಳಿಕ ವಧೂ - ವರರನ್ನು ಮಹಿಳಾ ಕೇಂದ್ರದ ಕಚೇರಿಗೆ ಕರೆದುಕೊಂಡು ಹೋಗಿ, ಕೌಟುಂಬಿಕ ಸಲಹೆ ನೀಡಿದ್ದಾರೆ. ಬಳಿಕ ಮುಚ್ಚಳಿಕೆ ಪತ್ರ ಬರೆದು ನವ ಜೋಡಿಯನ್ನು ಒಂದುಗೂಡಿಸಿದ್ದಾರೆ. 

ದಾಂಡೇಲಿಯ ವಿಕಲಚೇತನ ಯುವತಿ ಮತ್ತು ದಾಂಡೇಲಿಗೆ ಹತ್ತಿರದ ತಾಲೂಕಿನ ಯುವಕನ ಮದುವೆ ಬುಧವಾರ ಈಶ್ವರ ದೇವಸ್ಥಾನದಲ್ಲಿ ನಡೆದಿತ್ತು. ಯುವಕ ಮಧ್ಯವರ್ತಿಯ ಮೂಲಕ ಯುವತಿಯನ್ನು ನೋಡಲು ಹೋಗಿದ್ದ ಸಂದರ್ಭ ಯುವತಿಗೆ ಪೋಲಿಯೋ ಇರುವುದನ್ನು ಕುಟುಂಬಸ್ಥರು ತಿಳಿಸಿದ್ದರು. ಆದರೂ ಯುವಕ ಒಪ್ಪಿ ಮಾನವೀಯತೆ ಮೆರೆದಿದ್ದ. ಇದಾದ ಮೂರೇ ದಿನಕ್ಕೆ ಮದುವೆ ಶಾಸ್ತ್ರ ಮುಗಿಸಲಾಯಿತು.

ಆದರೆ ಊಟದ ಸಮಯದಲ್ಲಿ ವಧು ಎಡಗೈಯಲ್ಲಿ ಊಟ ಮಾಡುತ್ತಿರುವುದನ್ನು ಗಮನಿಸಿದ ವರ ತಕ್ಷಣ ವಧುವನ್ನು ಬಿಟ್ಟು ವಾಹನವನ್ನೇರಿ ಹೋಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ಆತನನ್ನು ತಡೆದು ನಿಲ್ಲಿಸಿ ಪೊಲೀಸರು ಮತ್ತು ಮಹಿಳಾ ಕೇಂದ್ರಕ್ಕೆ ವಿಷಯ ತಿಳಿಸಿದ್ದಾರೆ . ಸ್ಥಳಕ್ಕಾಗಮಿಸಿದ ಅಧಿಕಾರಿಗಳು ತಿಳಿ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu