
ಅರಕಲಗೂಡು ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಕೆಲವೇ ಸಮಯದಲ್ಲಿ ನವಜಾತ ಗಂಡು ಶಿಶುವನ್ನು ಅಪಹರಿಸಿದ ದುಷ್ಕರ್ಮಿಗಳು
Monday, March 14, 2022
ಹಾಸನ: ಇಲ್ಲಿನ ಅರಕಲಗೂಡು ಪಟ್ಟಣದ ಸರಕಾರಿ ಆಸ್ಪತ್ರೆಯೊಂದರಲ್ಲಿ ನವಜಾತ ಗಂಡು ಶಿಶುವನ್ನು ದುಷ್ಕರ್ಮಿಗಳು ರವಿವಾರ ರಾತ್ರಿ ಅಪಹರಣ ಮಾಡಿದ್ದಾರೆ.
ಅಸ್ಸಾಂ ಮೂಲದ ಕೂಲಿ ಕಾರ್ಮಿಕೆ ಮಹಿಳೆಯೋರ್ವರು ನವಜಾತ ಶಿಶುವನ್ನು ಕಳೆದುಕೊಂಡಾಕೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ರವಿವಾರ ಸಂಜೆ 7 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಆಕೆಗೆ ಹೆರಿಗೆ ಆಗಿತ್ತು.
ಈ ವೇಳೆ ಮಗುವನ್ನು ಅಪಹರಿಸಲು ಹೊಂಚು ಹಾಕುತ್ತಿದ್ದ ನಾಲ್ವರು ದುಷ್ಕರ್ಮಿಗಳು ತಡರಾತ್ರಿ 12 ಗಂಟೆ ಸುಮಾರಿಗೆ ಹೆರಿಗೆ ವಾರ್ಡ್ಗೆ ನುಗ್ಗಿ ಹಸುಗೂಸನ್ನು ಹೊತ್ತೊಯ್ದಿದ್ದಾರೆ. ಮಗು ಅಪಹರಿಸಲು ಬಂದ ನಾಲ್ವರಲ್ಲಿ ಓರ್ವ ನರ್ಸ್ ವೇಷ ಧರಿಸಿಕೊಂಡು ಬಂದಿದ್ದ. ಆಸ್ಪತ್ರೆಯ ಹಿಂಭಾಗದ ಬಾಗಿಲಿನಿಂದ ಶಿಶುವನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ಆಸ್ಪತ್ರೆಯ ಸಿಸಿ ಟಿವಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಮುಖಚಹರೆ ಸೆರೆಯಾಗಿದೆ. ಅರಕಲಗೂಡು ನಗರ ಪೊಲೀಸ್ ಠಾಣೆಗೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ದೂರು ನೀಡಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.