-->
ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಅವಘಡ: ಚಾಲಕ ಸಜೀವ ದಹನ

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಅವಘಡ: ಚಾಲಕ ಸಜೀವ ದಹನ

ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಅವಘಡದಲ್ಲಿ ಕಾಲ್ ಸೆಂಟರ್ ಉದ್ಯೋಗಿ ಸಜೀವ ದಹನವಾದ ಘಟನೆ ನೈಸ್‌ ರಸ್ತೆಯ ಚನ್ನಸಂದ್ರ ಸೇತುವೆ ಬಳಿ ಶನಿವಾರ ರಾತ್ರಿ 10.30ಕ್ಕೆ ಸಂಭವಿಸಿದೆ.

ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ದರ್ಶನ್ (35) ಜೀವಂತ ದಹನವಾಗಿದ್ದಾರೆ. ಮೃತ ದರ್ಶನ್ ತ್ಯಾಗರಾಜನಗರದ ಕಾಲ್ ಸೆಂಟರ್ ಕಂಪೆನಿಯಲ್ಲಿ (ಬಿಪಿಒ) ಸಾಫ್ಟ್​​ವೇರ್​ ಸಿಸ್ಟಮ್ ಆಪರೇಟಿಂಗ್ ವೃತ್ತಿ ನಿರ್ವಹಿಸುತ್ತಿದ್ದರು. ದರ್ಶನ್ ಅವರು ತಮ್ಮ ಸ್ಯಾಂಟ್ರೋ ಕಾರಿನಲ್ಲಿ ಶನಿವಾರ ರಾತ್ರಿ ತುಮಕೂರು ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ವಾಪಸಾಗುತ್ತಿದ್ದರು‌. ಈ ಸಂದರ್ಭ ಮಾರ್ಗಮಧ್ಯೆ ಚಿನ್ನಸಂದ್ರ ಸೇತುವೆಯ ಬಳಿ ಕಾರಿನ ಎಸಿ ಸಿಸ್ಟಮ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ತಿಳಿದು ಬಂದ ತಕ್ಷಣ ದರ್ಶನ್ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕಾರಿನ ಬಾಗಿಲು ತೆಗೆಯಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. 

ಆಗ ಅದೇ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ದರ್ಶನ್ ಕಾರಿಗೆ ಸಣ್ಣದಾಗಿ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅವರು ಸಹಾಯ ಮಾಡಲೆಂದು ತಮ್ಮ ಕಾರನ್ನು ನಿಲ್ಲಿಸಿ ದರ್ಶನ್ ಕಾರಿನ ಬಳಿ ಬಂದಿದ್ದಾರೆ. ಆಗ ಕಾರಿನ ಬಾಗಿಲು ತೆಗೆಯಲಾಗದೇ ಹೆಲ್ಪ್-ಹೆಲ್ಪ್ ಎಂದು ದರ್ಶನ್ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಸಹಾಯ ಮಾಡಲು ಬಂದವರು ಇನ್ನೇನು ಕಾರಿನ ಬಾಗಿಲು ತೆಗೆಯಬೇಕೆನ್ನುವಷ್ಟರಲ್ಲಿ ಸ್ಟೇರಿಂಗ್ ಬಳಿಯಿದ್ದ ಎಸಿ ಸಿಸ್ಟಮ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆ ಕಾರಿನ ಮುಂಭಾಗದ ಸೀಟ್ ಗೂ ವ್ಯಾಪಿಸಿ ದರ್ಶನ್ ಮೈಗೆ ಹತ್ತಿಕೊಂಡಿತ್ತು. 

ಇದರಿಂದ ಆತಂಕಿತರಾದ ವ್ಯಕ್ತಿ, ದರ್ಶನ್ ಕಾರಿನ ಹತ್ತಿರ ಹೋಗದೆ, ನೈಸ್ ಟೋಲ್ ಪೊಲೀಸರಿಗೆ ಕರೆ ಮಾಡಿದ್ದಾರೆ. ನೈಸ್ ರಸ್ತೆಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಆರಿಸಿದ್ದಾರೆ. ಆದರೆ, ಅಷ್ಟರಲ್ಲಿ ಬೆಂಕಿಯಿಂದ ದರ್ಶನ್ ಸಜೀವ ದಹನವಾಗಿದ್ದರು. ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದರ್ಶನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

2003 ಮಾಡೆಲ್‌ನ ಸ್ಯಾಂಟ್ರೋ ಕಾರು ಇದಾಗಿದ್ದು, ವೇಗವಾಗಿ ಬರುತ್ತಿದ್ದ ವೇಳೆ ಕಾರಿನ ಇಂಜಿನ್ ಬಿಸಿಯಾಗಿ ಏರ್ ಕಂಡಿಷನ್‌ಗೆ ಸಂಬಂಧಿಸಿದ ವಯರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿರಬಹುದು. ಆದ್ದರಿಂದ ಈ ಬೆಂಕಿ ಅವಘಡ ಸಂಭವಿಸಿರುವುದೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಫ್​ಎಸ್‌ಎಲ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಇನ್ನು ದರ್ಶನ್ ಅತಿಯಾಗಿ ಸಿಗರೇಟ್ ಸೇದುತ್ತಿದ್ದರು ಎನ್ನಲಾಗಿದ್ದು, ಸಿಗರೇಟ್ ಸೇದುತ್ತಿದ್ದಾಗ ಕಾರಿನ ಎಸಿ ಆನ್‌ನಲ್ಲಿದ್ದರೆ ಕೆಲವೊಮ್ಮೆ ಬೆಂಕಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಆದರೆ, ಕಾರಿನ ಇಂಜಿನ್‌ನಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ. ಸ್ಟೇರಿಂಗ್ ಪಕ್ಕದಲ್ಲಿರುವ ವಯರ್ ಸಿಸ್ಟಮ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದು ಪತ್ತೆಯಾಗಿದೆ. ಕಾರಿನ ಬಾಗಿಲು ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ತಕ್ಷಣ ಕಾರಿನಿಂದ ಹೊರಗಡೆ ಬರಲು ಸಾಧ್ಯವಾಗಿರಲಿಲ್ಲ ಎಂದು ಎಫ್​ಎಸ್‌ಎಲ್ ಮೂಲಗಳು ತಿಳಿಸಿವೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article