ಮಂಗಳೂರು: ಮೆಸ್ಕಾಂ ಎಇಇ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಮಂಗಳೂರು: ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದಯಾಲು ಸುಂದರ್ ರಾಜ್ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆದಿದೆ.

ಕಳೆದ ಹತ್ತು ವರ್ಷಗಳಿಂದಲೂ ದಯಾಲು ಸುಂದರ್ ರಾಜ್ ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು‌. ಮಂಗಳೂರಿನ ಕದ್ರಿ ಕಂಬಳದಲ್ಲಿ ಸ್ವಂತ ಫ್ಲ್ಯಾಟ್ ಅನ್ನು ಹೊಂದಿದ್ದರೂ, ಆ ಮನೆಯನ್ನು ಬಾಡಿಗೆಗೆ ನೀಡಿದ್ದಾರೆ‌. ಸದ್ಯ ಮಲ್ಲಿಕಟ್ಟೆಯಲ್ಲಿರುವ ಲೋಬೊಲೇನ್ ರೋಡ್ ನಲ್ಲಿರುವ ವಿಜಯ ಅಪಾರ್ಟ್‌ಮೆಂಟ್ ನಲ್ಲಿ ಬಾಡಿಗೆಗೆ ವಾಸವಾಗಿದ್ದಾರೆ. 

ಸದ್ಯ ದಯಾಲು ಸುಂದರ್ ರಾಜ್ ಎರಡು ಮನೆಗಳು ಹಾಗೂ ಕುಲಶೇಖರದ ಕಚೇರಿಯ ಮೇಲೆ ದಾಳಿ ನಡೆದಿದೆ. ಮಂಗಳೂರು ಎಸಿಬಿ ಎಸ್ಪಿ ಸಿ.ಎ.ಸೈಮನ್ ತಂಡ ಮತ್ತು ಕಾರವಾರ ಎಸಿಬಿ ತಂಡ ದಾಳಿ ನಡೆಸಿ ದಾಖಲೆಗಳು ಹಾಗೂ ಕಡತಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದಾರೆ.