
ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಕಾಮುಕರಿಗೆ 20ವರ್ಷಗಳ ಕಾರಾಗೃಹ ಶಿಕ್ಷೆ
3/23/2022 10:07:00 PM
ಚಿಕ್ಕಬಳ್ಳಾಪುರ: ಸಿಗರೇಟ್ ತರುವಂತೆ ಹೇಳಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಇಬ್ಬರು ಆರೋಪಿಗಳಿಗೆ ಚಿಕ್ಕಬಳ್ಳಾಪುರ ಅಪರ ಜಿಲ್ಲಾ ಸತ್ರ ಹಾಗೂ ಪೊಕ್ಸೊ ನ್ಯಾಯಾಲಯ 20 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಚಿಕ್ಕಬಳ್ಳಾಪುರ ಜಿಲೆಯ ಗೆದರೆ ಗ್ರಾಮದ ಅಶೋಕ (23) ಹಾಗೂ ಲೋಕೇಶ (23) ಶಿಕ್ಷೆಗೊಳಗಾದ ಅಪರಾಧಿಗಳು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೆದರೆ ಗ್ರಾಮದಲ್ಲಿ ಸಂತ್ರಸ್ತ ಬಾಲಕ ಆಟವಾಡುತ್ತಿದ್ದ. ಈ ಸಂದರ್ಭ ಅಶೋಕ ಹಾಗೂ ಲೋಕೇಶ ಬಾಲಕನಿಗೆ ಸಿಗರೇಟ್ ತರುವಂತೆ ಹೇಳಿದ್ದಾರೆ. ಆ ಬಳಿಕ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ 2021 ಎಪ್ರಿಲ್ 15 ರಂದು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿತ್ತು.
ಪ್ರಕರರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಚಿಕ್ಕಬಳ್ಳಾಪುರ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಜಿಲ್ಲಾ ಪೊಕ್ಸೊ ನ್ಯಾಯಾಲಯ ಆರೋಪಿಗಳಿಬ್ಬರ ಮೇಲಿನ ಆರೋಪ ಸಾಬೀತಾಗಿದೆ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಭಾನುಮತಿಯವರು ಅಪರಾಧಿಗಳಿಬ್ಬರಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕನಿಗೆ 1 ಲಕ್ಷ ರೂ. ಪರಿಹಾರ ಹಾಗೂ 2 ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ.