ಬೆಂಗಳೂರಿನಲ್ಲಿಯೂ ಸ್ಥಾಪನೆಯಾಗಲಿದೆ ಎನ್‌ಐಎ ಕಚೇರಿ!

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಶಾಖಾ ಕಚೇರಿಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಈ ಬಗ್ಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. 

ಬೆಂಗಳೂರು ಮಾತ್ರವಲ್ಲದೆ ಅಹ್ಮದಾಬಾದ್‌, ಪಾಟ್ನಾ, ಜೈಪುರ, ಭೋಪಾಲ, ಭುವನೇಶ್ವರದಲ್ಲಿಯೂ ಎನ್‌ಐಎ ಶಾಖಾ ಕಚೇರಿಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಎನ್ಐಎ ದಾಳಿಯು ಹೆಚ್ಚುತ್ತಿರುವಂತೆಯೇ ಕೇಂದ್ರ ಸರ್ಕಾರದ ಈ ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದೆ.

ಬೆಂಗಳೂರು, ಪಾಟ್ನಾ ಮತ್ತು ಭೋಪಾಲದಲ್ಲಿರುವ ಕಚೇರಿಗಳು ಡೆಪ್ಯುಟಿ ಇನ್ ಸ್ಪೆಕ್ಟರ್‌ ಜನರಲ್‌ ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ‌‌. ಇನ್ನುಳಿದ ನಗರಗಳ ಕಚೇರಿಗಳಲ್ಲಿ ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್‌ ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಾಗುತ್ತದೆ.

ಈ ಆರು ನೂತನ ಕಚೇರಿಗಳಿಗೆ 435 ಹುದ್ದೆಗಳನ್ನು ಹೊಸತಾಗಿ ಸೃಷ್ಟಿಸಬೇಕಾಗುತ್ತದೆ. ಬೆಂಗಳೂರು ಕಚೇರಿ ಸೇರಿದಂತೆ ಪ್ರತಿಯೊಂದು ಕಚೇರಿಯಲ್ಲಿ 70 ಸಿಬ್ಬಂದಿ ಹಾಗೂ ಅಧಿಕಾರಿ ಹುದ್ದೆಯನ್ನು ಸೃಷ್ಟಿ ಮಾಡಲು ಕೇಂದ್ರ ಗೃಹ ಸಚಿವಾಲಯ ವಿತ್ತ ಸಚಿವಾಲಯಕ್ಕೆ ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿರುವ ವಿತ್ತ ಸಚಿವಾಲಯ ಪ್ರತೀ ಕಚೇರಿಯಲ್ಲಿ 50 ಹುದ್ದೆಗಳ ಸೃಷ್ಟಿಗೆ ಅನುಮೋದನೆ ನೀಡಿದೆ.
BREAKING NEWS
Loading latest news...
Join our WhatsApp Channel Powered By : Online Pudu