ಕಾಂಗ್ರೆಸ್ ಮುಖಂಡನ‌ ಮೇಲೆ ಪತ್ನಿಯಿಂದಲೇ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕ, ಕೊಲೆ ಸಂಚು ಆರೋಪ

ಹುಬ್ಬಳ್ಳಿ: ಕಾಂಗ್ರೆಸ್​ ಮುಖಂಡನ ಅನೈತಿಕ ಸಂಬಂಧ, ಡ್ರಗ್ ಪೆಡ್ಲರ್ ಸಂಪರ್ಕ ಹಾಗೂ ಕೊಲೆ ಸಂಚು ಕುರಿತು ಇದೀಗ ಆತನ ಪತ್ನಿಯೇ ಆರೋಪ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. 

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಅಕಾಂಕ್ಷಿ ಗಿರೀಶ ಗದಿಗೆಪ್ಪಗೌಡರ ವಿರುದ್ಧ ಆತನ ಪತ್ನಿ ಜಯಲಕ್ಷ್ಮಿ ಸುದ್ದಿಗೋಷ್ಠಿ ನಡೆಸಿ ಆರೋಪ ಹೊರಿಸಿದ್ದಾರೆ. 20 ವರ್ಷಗಳಿಂದ ಸಂಸಾರ ನಡೆಸಿದ್ದ ಪತಿ ಈಗ ಪರಸ್ತ್ರೀಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಅಲ್ಲದೆ ಆತ ಡ್ರಗ್​ ಪೆಡ್ಲರ್ ಗಳ ಜತೆ ಸಂಪರ್ಕವನ್ನೂ ಹೊಂದಿದ್ದಾರೆ ಎಂದು ಫೋಟೋ ಸಹಿತ ಮಾಹಿತಿ ನೀಡಿದ್ದಾರೆ. ಈ ಮೂಲಕ ಗಿರೀಶ ಗದಿಗೆಪ್ಪಗೌಡರನ ಕ್ಯಾಸಿನೊ ಗಲಾಟೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 

ಪತಿ ಗೋವಾದಲ್ಲಿ ಕ್ಯಾಸಿನೊ ವ್ಯವಹಾರ ಆರಂಭಿಸಿರುವ ಬಳಿಕ ಅವರಲ್ಲಾದ ಬದಲಾವಣೆಗಳನ್ನು ಗಮನಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದಾಗ ಅವರಿಗೆ ಗದಗದ ಯುವತಿಯೊಂದಿಗೆ ಅನೈತಿಕ ಸಂಬಂಧ ಇರುವುದು ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅದಲ್ಲದೆ, ಈ ಕೃತ್ಯಕ್ಕೆ ಅವರ ಅಳಿಯಂದಿರಾದ ಹರ್ಷವರ್ಧನ ಮಲಕಣ್ಣವರ, ನೀಲಕಂಠ ಮಲಕಣ್ಣವರ ಹಾಗೂ ಮೈತ್ರಾಯಿಣಿ ಗದಿಗೆಪ್ಪಗೌಡರ ಕೂಡ ಪ್ರೋತ್ಸಾಹ ನೀಡಿದ್ದಾರೆ. 

ಗಿರೀಶ್ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾದ ಯುವತಿಗೆಂದು ಆಸ್ತಿಪತ್ರಗಳಿಗೆ ಸಹಿ ಮಾಡುವಂತೆ ಪದೇಪದೇ ತನ್ನ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಹಲ್ಲೆ ನಡೆಸಲಾಗುತ್ತಿದೆ. ವಿಚ್ಛೇದನ ನೀಡುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಿದ್ಧರಾಮಯ್ಯ ಹಾಗೂ ಮತ್ತಿತರ ಕಾಂಗ್ರೆಸ್ ನಾಯಕರ ಬೆಂಬಲವಿದೆ, ತನ್ನನ್ನು ಯಾರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. 

ಗನ್ ಪಾಯಿಂಟ್ ಇಟ್ಟು ಬೆದರಿಸಲಾಗುತ್ತದೆ. ತನಗೆ ಜೀವಭಯವಿದ್ದು, ಸದ್ಯ ನಾನು ತಾಯಿಯ ಮನೆಯಲ್ಲಿದ್ದೇನೆ ಎಂದು ಆರೋಪಿಸಿರುವ ಜಯಲಕ್ಷ್ಮಿ ಪೊಲೀಸ್ ಕಮಿಷನರ್​ಗೆ ಕೂಡ ದೂರು ಸಲ್ಲಿಸಿದ್ದಾರೆ. ನಟಿ ರಾಗಿಣಿ ಡ್ರಗ್ಸ್ ಕೇಸ್​​ನಲ್ಲಿ ವಿಚಾರಣೆಗೊಳಗಾಗಿದ್ದ ಗಿರೀಶ್ ಡ್ರಗ್​ ಪೆಡ್ಲರ್​ಗಳ ಜತೆ ಸಂಪರ್ಕ ಹೊಂದಿರುವುದಾಗಿ ಪತ್ನಿ ಆರೋಪಿಸಿದ್ದಾರೆ. ತನಗೆ ಜೀವರಕ್ಷಣೆ ಒದಗಿಸುವ ಜತೆಗೆ ಪತಿಯೊಂದಿಗೆ ಸೇರಿ ಹಿಂಸೆ ನೀಡುತ್ತಿರುವ ಅವರ ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಯಲಕ್ಷ್ಮಿ ಒತ್ತಾಯಿಸಿದ್ದಾರೆ.