
ಹೊಕ್ಕಾಡಿಗೋಳಿ ಕಂಬಳದಲ್ಲಿ ಕೋಣ ಓಡಿಸುವಾಗ ಬಿದ್ದರೂ ಛಲ ಬಿಡದೆ ಗುರಿ ಮುಟ್ಟಿದ ಓಟಗಾರ: ವೀಡಿಯೋ ವೈರಲ್
Monday, December 6, 2021
ಬಂಟ್ವಾಳ: ಕಂಬಳ ಓಟವೇ ಒಂದು ರೋಮಾಂಚಕಾರಿ ಕ್ರೀಡೆ. ಕೆಸರು ಗದ್ದೆಯಲ್ಲಿ ಕೋಣಗಳಷ್ಟೇ ವೇಗದಲ್ಲಿ ಓಟಗಾರನೂ ಓಡುವುದಂತೂ ಸಾಹಸೀ ವಿದ್ಯೆ. ಇದೀಗ ನಿನ್ನೆ ನಡೆದ ಹೊಕ್ಕಾಡಿಗೋಳಿ ಕಂಬಳದಲ್ಲಿ ಕೋಣಗಳನ್ನು ಓಡಿಸುವ ವೇಳೆ ಕಂಬಳದ ಕರೆಯಲ್ಲಿ ಓಟಗಾರ ಬಿದ್ದರೂ, ಛಲ ಬಿಡದೆ ಕೋಣಗಳೊಂದಿಗೆ ಎಳೆದೊಯ್ದು ಗುರಿ ಮುಟ್ಟಿದ ರೋಮಾಂಚನಕಾರಿ ಘಟನೆ ಸಂಭವಿಸಿದೆ. ಇದರ ವೀಡಿಯೋ ಈಗ ಭಾರೀ ವೈರಲ್ ಆಗುತ್ತಿದೆ.
ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ದಿನಿ ಕಂಬಳ ಸಮಿತಿಯ ವತಿಯಿಂದ ಹೊಕ್ಕಾಡಿಗೋಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಈ ಘಟನೆ ನಡೆದಿದೆ. ಪ್ರಸ್ತುತ ಈ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
ಹಗ್ಗದ ಕಿರಿಯ ವಿಭಾಗದಲ್ಲಿ , ಪ್ರಿ ಕ್ವಾರ್ಟರ್ ಫೈನಲ್ ಸಂದರ್ಭ ಬಿಳಿಯೂರು, ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿಯವರು ಓಡಿಸುತ್ತಿದ್ದರು. ಅವರು ಕಂಬಳದ ಕರೆಯಲ್ಲಿ ಕೋಣಗಳನ್ನು ಓಡಿಸುವ ಸಂದರ್ಭ ಕರೆಯನ್ನು ಮುಕ್ಕಾಲು ಭಾಗ ಕ್ರಮಿಸುವಾಗ ಬಿದ್ದಿದ್ದಾರೆ. ಆದರೆ ಹಗ್ಗವನ್ನು ಬಿಡದೆ ಕೋಣಗಳು ಎಳೆದೊಯ್ಯುತ್ತಿದ್ದರೂ ಛಲದಿಂದ ಅವರು ಗುರಿ ಮುಟ್ಟಿದ್ದಾರೆ.
ಸುಮಾರು 20 ಮೀ.ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ್ದಾರೆ. ಆಕಾಶ್ ಭಂಡಾರಿಯವರ ಸಾಹಸವನ್ನು ಕಂಬಳಾಭಿಮಾನಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸುತ್ತಿದೆ.