ಆಕೆ ಬರೆದ ಇನ್ ಸ್ಟಾಗ್ರಾಂ ಪೋಸ್ಟ್ ನಿಜವಾಗಿಯೇ ಹೋಯ್ತು: ಮತ್ತೆ ಬಾರದ ಲೋಕಕ್ಕೆ ಪ್ರಯಾಣಿಸಿದ ಅನ್ಸಿ ಕಬೀರ್

ಕೊಚ್ಚಿ: ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಅಪ್ಲೋಡ್ ಮಾಡಿ ಅದರ ಅಡಿಬರಹವಾಗಿ "ಹೋಗುವ ಕಾಲ ಬಂತು" ( It’s time to go…) ಎಂದು ನಿನ್ನೆಯಷ್ಟೇ ಬರೆದುಕೊಂಡಿದ್ದ 2019ರ ‘ಮಿಸ್‌ ಕೇರಳ‘ ಕಿರೀಟ ಮುಡಿಗೇರಿಸಿಕೊಂಡಿದ್ದ 24 ವರ್ಷದ ಅನ್ಸಿ ಕಬೀರ್ ನಿನ್ನೆ ರಾತ್ರಿ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಿನ್ನೆ ತಡರಾತ್ರಿ 2019ರಲ್ಲಿ ಇದೇ ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ ಅಪ್‌ ಆಗಿ ಮಿಂಚಿದ್ದ ಅಂಜನಾ ಶಾಜನ್ (25) ಕೂಡ ಇದೇ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. 

ಇಬ್ಬರೂ ತ್ರಿಶೂರ್​ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ನಿನ್ನೆ ತಡರಾತ್ರಿ ಕೊಚ್ಚಿಯ ವೈಟಿಲ ಪ್ರದೇಶದಲ್ಲಿ ಇವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬೈಕ್ ಸವಾರನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಇದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, ಅನ್ಸಿ ಹಾಗೂ ಅಂಜನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ನಡುವೆ ಅನ್ಸಿ ಕಬೀರ್ ಅವರು ಮೃತಪಡುವುದಕ್ಕಿಂತ ಮೊದಲು ಮಾಡಿರುವ ಇನ್ ಸ್ಟಾಗ್ರಾಂ ಪೋಸ್ಟ್‌ ಈಗ ವೈರಲ್‌ ಆಗುತ್ತಿದೆ. ಅದರಲ್ಲಿ ಪೋಸ್ಟ್ ನಲ್ಲಿ ತಮ್ಮ ವೀಡಿಯೋ ಒಂದನ್ನು ಶೇರ್‌ ಮಾಡಿದ್ದಾರೆ. ಬಿಳಿಯ ಡ್ರೆಸ್‌ ತೊಟ್ಟಿದ್ದ ಅವರು ಹಸಿರು ಸಿರಿಯ ನಡುವೆ ನಡೆದುಕೊಂಡು ಹೋಗುತ್ತಿರುವ ವೀಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. 

ಈ ವೀಡಿಯೋಗೆ ಅವರು ಕೊಟ್ಟ ಕ್ಯಾಪ್ಷನ್‌ 'ಹೋಗುವ ಕಾಲ ಬಂದಿದೆ' ಎಂದು. ಇದನ್ನು ಅನ್ಸಿ ಕಬೀರ್ ಯಾವ ಅರ್ಥದಲ್ಲಿ ಬರೆದುಕೊಂಡಿದ್ದರೋ ತಿಳಿಯದು. ಆದರೆ ಅವರು ಬರೆದುಕೊಂಡಿರುವ ಪೋಸ್ಟ್‌ ನಿಜವಾಗಿ ಹೋಗಿದೆ. ಆಕೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೀಗ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್ ಓದಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.