-->
ಎಚ್.ಡಿ.ರೇವಣ್ಣ ಕುಟುಂಬಸ್ಥರು ಪ್ರಾಣ ಹಿಂಡುತ್ತಿದ್ದಾರೆ, ಅವರ ಮನೆಯವರನ್ನು ಸೋಲಿಸು... ಹೊಳೆನರಸೀಪುರ ಎಂಎಲ್ಎ ಬದಲಾಗಲಿ ಹಾಸನಾಂಬೆಗೆ ಪ್ರಾರ್ಥಿಸಿ ಭಕ್ತರಿಂದ ಹುಂಡಿಗೆ ಪತ್ರ

ಎಚ್.ಡಿ.ರೇವಣ್ಣ ಕುಟುಂಬಸ್ಥರು ಪ್ರಾಣ ಹಿಂಡುತ್ತಿದ್ದಾರೆ, ಅವರ ಮನೆಯವರನ್ನು ಸೋಲಿಸು... ಹೊಳೆನರಸೀಪುರ ಎಂಎಲ್ಎ ಬದಲಾಗಲಿ ಹಾಸನಾಂಬೆಗೆ ಪ್ರಾರ್ಥಿಸಿ ಭಕ್ತರಿಂದ ಹುಂಡಿಗೆ ಪತ್ರ

ಹಾಸನ: ಎಚ್​.ಡಿ.ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡುತ್ತಿದ್ದು, ಚುನಾವಣೆಯಲ್ಲಿ ಅವರ ಕುಟುಂಬ ಸದಸ್ಯರನ್ನೆಲ್ಲಾ ಸೋಲಿಸಿ ಬಿಡು ತಾಯಿ. ಅವರು ಯಾರನ್ನೂ ಮುಂದೆ ಬರಲು ಬಿಡುತ್ತಿಲ್ಲ. ತಾಯೇ ನಿನ್ನ ಕೃಪೆಯಿಂದ ‌ಹೊಳೆನರಸೀಪುರದ ಶಾಸಕರು ಬದಲಾಗಬೇಕು. ಈ ಮೂಲಕ ಹೊಳೆನರಸೀಪುರದ ಜನರಿಗೆ ಒಳ್ಳೆಯದನ್ನು ಮಾಡು ತಾಯಿ, ನನ್ನ ಹಿರಿಯ ಪುತ್ರನಿಗೆ ಮದುವೆ‌‌ ಮಾಡು. ಒಂದು ವರ್ಷದೊಳಗೆ ನಮ್ಮ ಮನೆ ಕಟ್ಟಿದರೆ 301 ರೂ.ವನ್ನು ನಿನ್ನ ಹುಂಡಿಗೆ ಕಾಣಿಕೆ ಹಾಕುವೆ… ನನಗೆ ಬೇಗ ಪ್ರಮೋಷನ್ ಕೊಡಿಸುವಂತೆ ಮಾಡು ತಾಯಿ… ಒಂದು ವರ್ಷದೊಳಗೆ ನನ್ನ ಈರ್ವರೂ ಹೆಣ್ಣುಮಕ್ಕಳಿಗೆ ಮದುವೆ ಆಗುವಂತೆ ನಾಡು… ಭೂಗಳ್ಳನಿಂದ ನನ್ನ ಭೂಮಿಯನ್ನು ಕಾಪಾಡಿ ನನಗೇ ಕೊಡಿಸು ತಾಯೆ… ಕೊರೊನಾ ತೊಲಗಿಸಿ ಎಲ್ಲರಿಗೂ ‌ಒಳ್ಳೆಯ ಆರೋಗ್ಯ ಕರುಣಿಸು… ಇದು ಹಾಸನಾಂಬಾ ದೇವಿಗೆ ಭಕ್ತರು ಹರಕೆ ಮಾಡಿ ಬರೆದಿರುವ ವಿಭಿನ್ನ ಪತ್ರಗಳು.

ಹಾಸನಾಂಬೆಯ ದರ್ಶನೋತ್ಸವದ ಬಳಿಕ ದೇಗುಲದ ಹುಂಡಿಯಲ್ಲಿನ ಹಣದ ಎಣಿಕಾ ಕಾರ್ಯ ಸೋಮವಾರ ನಡೆಯಿತು. ಈ ವೇಳೆ ಭಕ್ತರು ದೇವಿಗೆ ತಮ್ಮ ವಿಭಿನ್ನ ಕೋರಿಕೆಯನ್ನು ಬರೆದು ಹುಂಡಿಗೆ ಹಾಕಿರುವ ನೂರಾರು ಪತ್ರಗಳೂ ದೊರಕಿವೆ. 

ಹಾಸನದ 35ನೇ ವಾರ್ಡ್ ವ್ತಕ್ತಿಯೋರ್ವರು ‘ನಮ್ಮ‌ ಬೀದಿಯ ರಸ್ತೆಯ ಪೂರ್ತಿ ಹೊಂಡ ಬಿದ್ದಿದ್ದು, ಅದನ್ನು ಸರಿಪಡಿಸು ತಾಯಿ’ ಎಂದು ಪತ್ರ ಬರೆದಿದ್ದಾರೆ. ವಿದ್ಯಾರ್ಥಿಯೋರ್ವನು ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90 ಪರ್ಸಂಟೇಜ್ ಬರಬೇಕೆಂದು ಪತ್ರ ಬರೆದು ದೇವಿಗೆ ಮೊರೆ ಇಟ್ಟಿದ್ದಾನೆ. ನನಗೆ ಗಂಡು ಸಂತಾನವನ್ನು ಕರುಣಿಸು, ನಿನ್ನ ಹುಂಡಿಗೆ ಐದು ಸಾವಿರ ರೂ‌. ಕೊಡುವೆ ಎಂಬ ಪತ್ರ ದೊರಕಿದೆ. ಪತಿಯ ಕುಡಿತದ ಚಟ ನಿಲ್ಲಲಿ… ತಾನು ಇಷ್ಟಪಟ್ಟ ಯುವಕನೊಂದಿಗೆ ವಿವಾಹ ನೆರವೇರುವಂತೆ ಮಾಡಿಸು ತಾಯಿ ಎಂದು ಯುವತಿಯೊಬ್ಬಳು ರಕ್ತದಲ್ಲಿ ಪತ್ರ ಬರೆದಿದ್ದಾಳೆ. ಹಾಸನ ಜಿಲ್ಲಾ ಕಸಾಪಕ್ಕೆ ಸಾಹಿತಿ‌ ಡಾ.ಎಚ್.ಎಲ್.ಮಲ್ಲೇಶ್ ಗೌಡರನ್ನು ಅಧ್ಯಕ್ಷರಾಗುವಂತೆ ಅನುಗ್ರಹಿಸು ತಾಯಿ‌. ವಸೂಲಿ ಹಾಗೂ ದಂಧೆಕೋರರ ಕಪಿಮುಷ್ಠಿಯಿಂದ‌ ಕನ್ನಡ ಪವಿತ್ರ ಭವನ ಮುಕ್ತವಾಗಲಿ… ಹೀಗೆ ತರೇಹವಾರಿ ಪತ್ರಗಳು ಹಾಸನಾಂಬೆ ಹುಂಡಿಯಲ್ಲಿ ದೊರಕಿವೆ. 

ಈ ರೀತಿ ತಮ್ಮ‌ ನೋವು, ಸಮಸ್ಯೆಗಳನ್ನು ಪರಿಹರಿಸುವಂತೆ ದೇವರಲ್ಲಿ ಭಕ್ತರು ಮೊರೆ ಇಡುವುದು ಸಾಮಾನ್ಯ. ಆದರೆ ಹಾಸನದ ಪ್ರಭಾವಿ ರಾಜಕಾರಣಿ ಕುಟುಂಬವಾಗಿರುವ ಎಚ್​.ಡಿ.ರೇವಣ್ಣರ ಕುಟುಂಬ ಸದಸ್ಯರನ್ನೇ ಸೋಲಿಸುವಂತೆ ದೇವಿಗೆ ಪತ್ರ ಬರೆದಿರುವುದು ಹಾಗೂ ‌ಹೊಳೆನರಸೀಪುರ ಶಾಸಕರ ಬದಲಾವಣೆಗೂ ದೇವಿಗೆ ಮನವಿ ಮಾಡಿರುವ ಪತ್ರಗಳು ಮಾತ್ರ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿವೆ. 

Ads on article

Advertise in articles 1

advertising articles 2

Advertise under the article