4G ಡೇಟಾ ಡೌನ್ಲೋಡ್ ವೇಗದಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರಿದ ಜಿಯೋ

ನವದೆಹಲಿ: ರಿಲಯನ್ಸ್ ಜಿಯೋ ನೆಟ್‌ವರ್ಕ್‌ ಪ್ರತಿ ಸೆಕೆಂಡ್‌ಗೆ ಸರಾಸರಿ 21.9 Megabyte (ಎಂಬಿಪಿಎಸ್) ಡೌನ್‌ಲೋಡ್ ವೇಗದೊಂದಿಗೆ 4G ವಿಭಾಗದಲ್ಲಿ ಅಕ್ಟೋಬರ್ ತಿಂಗಳಲ್ಲಿಯೂ ಮೊದಲ ಸ್ಥಾನದಲ್ಲಿದಲ್ಲಿಯೇ ಮುಂದುವರಿದಿದೆ ಎಂದು ಟ್ರಾಯ್ ತಿಳಿಸಿದೆ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಅಕ್ಟೋಬರ್ ನಲ್ಲಿ ರಿಲಯನ್ಸ್ ಜಿಯೋ ತನ್ನ 4G ನೆಟ್‌ವರ್ಕ್ ವೇಗವನ್ನು ಜೂನ್ ನಲ್ಲಿ ದಾಖಲಾಗಿದ್ದಂತೆಯೇ 21.9 ಎಂಬಿಪಿಎಸ್‌ಗೆ ಮತ್ತೆ ಹೆಚ್ಚಿಸಿಕೊಂಡಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿ. (ವಿಐಎಲ್) ಕೂಡ ತಮ್ಮ ಡೇಟಾ ಡೌನ್‌ಲೋಡ್ ವೇಗದಲ್ಲಿ ಹೆಚ್ಚಳ ಕಂಡುಕೊಂಡಿವೆ.

Airtel 4G ಡೇಟಾ ಡೌನ್‌ಲೋಡ್ ವೇಗವು ಅಕ್ಟೋಬರ್ ನಲ್ಲಿ 13.2 ಎಂಬಿಪಿಎಸ್‌ಗೆ ಏರಿಕೆಯಾಗಿದೆ. ಜೂನ್ ನಲ್ಲಿ ಇದರ ಸರಾಸರಿ ಡೌನ್‌ಲೋಡ್ ವೇಗ 5 ಎಂಬಿಪಿಎಸ್ ಇತ್ತು. ಹಾಗೆಯೇ ವಿಐಎಲ್ ಕೂಡ ಡೌನ್‌ಲೋಡ್ ವೇಗವನ್ನು 6.5 ಎಂಬಿಪಿಎಸ್ ವೇಗದಿಂದ 15.6 ಎಂಬಿಪಿಎಸ್‌ಗೆ ಹೆಚ್ಚಿಸಿಕೊಂಡಿದೆ.‌ ಅದೇ ರೀತಿ ಅಪ್‌ಲೋಡ್ ವಿಭಾಗದಲ್ಲಿ 7.6 ಎಂಬಿಪಿಎಸ್ ಡೇಟಾ ವೇಗ ಹೊಂದಿರುವ ವೊಡಾಫೋನ್ ಐಡಿಯಾ ಅಕ್ಟೋಬರ್‌ ತಿಂಗಳಲ್ಲಿ ಕೂಡ ಪ್ರಥಮ ಸ್ಥಾನದಲ್ಲಿ ಮುಂದುವರಿದಿದೆ.

ಜಿಯೋ ಹಾಗೂ ಏರ್‌ಟೆಲ್‌ಗಳು ಅಕ್ಟೋಬರ್ ನಲ್ಲಿ ತಮ್ಮ ಅಪ್‌ಲೋಡ್ ವೇಗವನ್ನು ಹೆಚ್ಚಿಸಿಕೊಂಡಿದೆ. ಇದು ಕಳೆದ ಐದು ತಿಂಗಳಲ್ಲಿಯೇ ಅತ್ಯಧಿಕ ವೇಗವಾಗಿದೆ. ಜಿಯೋ 6.4 ಎಂಬಿಪಿಎಸ್ ಸರಾಸರಿ ಅಪ್‌ಲೋಡ್ ವೇಗ ಹೊಂದಿದ್ದರೆ, ಏರ್‌ಟೆಲ್ 5.2 ಎಂಬಿಪಿಎಸ್ ವೇಗ ದಾಖಲಿಸಿದೆ. ಡೌನ್‌ಲೋಡ್ ವೇಗವು ಗ್ರಾಹಕರು ಇಂಟರ್ ನೆಟ್ ಮಾಹಿತಿಗಳನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಫೋಟೊಗಳು ಹಾಗೂ ವೀಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ. ಮೈಸ್ಪೀಡ್ ಆಪ್‌ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.