ಹುದ್ದೆಗೆ ತರಬೇತಿ ಪಡೆಯುವಾಗ ಪ್ರೀತಿ, ಬಳಿಕ ಮದುವೆ, ಒಟ್ಟಿಗೆ ಸರಕಾರಿ ಹುದ್ದೆಗೆ ನೇಮಕ, ಒಂದೇ ಕಡೆಯಲ್ಲಿ ಪೋಸ್ಟಿಂಗ್: ದಂಪತಿ ಜೋಡಿಯ ಥ್ರಿಲ್ಲಿಂಗ್ ಸ್ಟೋರಿ

ಅಥಿರಪ್ಪಿಲ್ಲಿ: ಇದೊಂದು ಜೋಡಿಯೊಂದರ ಅಪರೂಪದ ಥ್ರಿಲ್ಲಿಂಗ್ ಸ್ಟೋರಿ. ಹುದ್ದೆಗೆ ತರಬೇತಿ ಪಡೆಯುವ ಕಾಲಕ್ಕೆ ಈ ಜೋಡಿ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಬದುಕಿನ ಪಯಣವನ್ನು ಜಂಟಿಯಾಗಿ ಕಳೆಯಲು ಮದುವೆಯಾಗಿದೆ. ಬಳಿಕ ಇಬ್ಬರಿಗೂ ಒಟ್ಟಿಗೆ ಸರ್ಕಾರಿ ಹುದ್ದೆ ದೊರಕಿದ್ದು, ಇದೀಗ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ಕೇರಳದ ಜಾಕ್ಸನ್​ ಮತ್ತು ರಿಯಾ ಎಂಬ ದಂಪತಿಯೇ ಆ ಅಪರೂಪದ ಜೋಡಿ. ಇಬ್ಬರಿಗೂ ಕೇರಳದ ಕೊಣ್ಣಕ್ಕುಜಿ ಅರಣ್ಯ ವಲಯದ ಅರಣ್ಯ ರಕ್ಷಕರಾಗಿ ಪೋಸ್ಟಿಂಗ್ ಆಗಿದ್ದು, ಜೊತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸರಕಾರಿ ಹುದ್ದೆಗೆ ತರಬೇತಿ ಪಡೆಯುವ ಸಂದರ್ಭ ಇಬ್ಬರ ನಡುವೆ ಪರಿಚಯವಾಗಿದೆ, ಬಳಿಕ ಅದು ಪ್ರೀತಿಗೆ ತಿರುಗಿದೆ. ಬಳಿ ಮದುವೆ ಆಗಿದ್ದಾರೆ. ಮದುವೆಯಾದ ಎರಡೇ ತಿಂಗಳಲ್ಲಿ ಇಬ್ಬರಿಗೂ ಕೊಣ್ಣಕ್ಕುಜಿ ಅರಣ್ಯ ವಲಯದಲ್ಲಿ ಅರಣ್ಯ ರಕ್ಷಕರಾಗಿ ನೌಕರಿ ದೊರಕಿದೆ. ಇದೀಗ ಇವರಿಬ್ಬರು ಜೊತೆಯಾಗಿ ಸರಕಾರಿ ಸೇವೆ ಸಲ್ಲಿಸಲು ಆರಂಭಿಸಿ ಒಂದೂವರೆ ವರ್ಷಗಳಾಗುತ್ತಾ ಬರುತ್ತಿದೆ.

ಅದೇ ರೀತಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲೂ  ದಂಪತಿ ಅನೇಕ ಥ್ರಿಲ್ಲಿಂಗ್​ ಮತ್ತು ಅಪಾಯಕಾರಿ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಅನೇಕ ಬಾರಿ ಇಬ್ಬರೂ ಕಾಡುಪ್ರಾಣಿಗಳ ಸಂಭವನೀಯ ದಾಳಿಯಿಂದ ಬಚಾವ್​ ಆಗಿದ್ದಾರಂತೆ. ಒಮ್ಮೆ ಆನೆಗಳ ಹಿಂಡನ್ನು ಹಿಮ್ಮೆಟ್ಟಿಸಲು ಹೋಗಿ ಆನೆಯೊಂದು ಅವರ ವಿರುದ್ಧವೇ ತಿರುಗಿ ದಾಳಿ ಮಾಡಲು ಮುಂದಾಗಿತ್ತು. ಈ ಕ್ಷಣವನ್ನು ನೆನೆದಾಗ ಈಗಲೂ ಭಯವಾಗುತ್ತದೆ ಎಂದು ದಂಪತಿ ಆ ಘಟನೆಯನ್ನು ನೆನೆಯುತ್ತಾರೆ. 

ಅಂದ ಹಾಗೆ ಜಾಕ್ಸನ್​ ಮತ್ತು ರಿಯಾ ಕೇರಳದ ಛಲಕ್ಕುಡಿ ಪಿಎಸ್​ಸಿ ಕೋಚಿಂಗ್​ ಸೆಂಟರ್​ನಲ್ಲಿ ಸರಕಾರಿ ಹುದ್ದೆಗೆ ಒಟ್ಟಿಗೆ ಅಧ್ಯಯನ ನಡೆಸಿದರು. ಬಳಿಕ ಅರಣ್ಯ ಇಲಾಖೆಯ ಬೀಟ್​ ಅರಣ್ಯಾಧಿಕಾರಿ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಮದುವೆಯಾದ ಬಳಿಕ ಇಬ್ಬರಿಗೂ ಏಕಕಾಲದಲ್ಲಿ ನೇಮಕಾತಿ ಪತ್ರ ಬಂದಿತ್ತು. ಇದೀಗ ಇಬ್ಬರು ಅರಣ್ಯ ರಕ್ಷಕರಾಗಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.