ಮುಂಬೈ: ಇತ್ತೀಚಿಗೆ ಸಿನಿಮಾ ನಟರಷ್ಟೇ ಅವರ ಮಕ್ಕಳು ಕೂಡಾ ಸದಾ ಸುದ್ದಿಯಲ್ಲಿರುತ್ತಾರೆ. ಸೆಲೆಬ್ರಿಟಿಗಳ ಮಕ್ಕಳ ಬಗ್ಗೆ ಕುತೂಹಲಕಾರಿ ವಿಚಾರಗಳು ಸದಾ ಒಂದಿಲ್ಲೊಂದು ರೀತಿ ವರದಿಯಾಗುತ್ತಲೇ ಇರುತ್ತದೆ. ಇದೀಗ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಮಗಳು ದಿಶಾನಿ ಚಕ್ರವರ್ತಿ ಸುದ್ದಿಯಲ್ಲಿದ್ದು, ಬಾಲಿವುಡ್ ಅಂಗಳ ಪ್ರವೇಶ ಮಾಡಲು ಕನಸು ಕಾಣುತ್ತಿದ್ದಾರೆ.
ಅಂದ ಹಾಗೆ ದಿಶಾನಿ ಚಕ್ರವರ್ತಿ ನಿಜವಾದ ಹೆತ್ತವರು ಆಕೆಯನ್ನು ಕಸದ ತೊಟ್ಟಿಯಲ್ಲಿ ಬಿಸಾಡಿದ್ದರಂತೆ. ಈ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮಿಥುನ್ ಚಕ್ರವರ್ತಿ ಹಾಗೂ ಯೋಗಿತಾ ಬಾಲಿ ದಂಪತಿಯು ಹಸುಳೆಯಾಗಿದ್ದ ದಿಶಾನಿಯನ್ನು ದತ್ತು ತೆಗೆದುಕೊಂಡು ತಮ್ಮ ನಿಜವಾದ ಮಗಳಂತೆ ಸಾಕಿ ಸಲಹಿ ಬೆಳಸಿದ್ದಾರೆ.
ಈಗ ಬೆಳೆದು ದೊಡ್ಡವಳಾಗಿರುವ ದಿಶಾನಿಯನ್ನು ಮಿಥುನ್ ಚಕ್ರವರ್ತಿ ಹಾಗೂ ಯೋಗಿತಾ ಬಾಲಿ ದಂಪತಿ ತಮ್ಮ ಮೂವರು ಗಂಡು ಮಕ್ಕಳೊಂದಿಗೆ ಯಾವುದೇ ಭೇದ ಭಾವವಿಲ್ಲದೆ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯ ನ್ಯೂಯಾರ್ಕ್ ನ ಫಿಲಂ ಅಕಾಡೆಮಿಯಿಂದ ನಟನಾ ಕೋರ್ಸ್ ಅನ್ನು ದಿಶಾನಿ ಮುಗಿಸಿ ಮರಳಿ ಭಾರತಕ್ಕೆ ಬಂದಿದ್ದಾರೆ.
ಈ ನಡುವೆ 2017ರಲ್ಲಿ ಹೋಲಿ ಸ್ಮೋಕ್ ಎಂಬ ಕಿರು ಚಿತ್ರದಲ್ಲೂ ನಟಿಸಿದ್ದರು. ಸದ್ಯ ಬಾಲಿವುಡ್ ಪ್ರವೇಶಕ್ಕೆ ಸಕಲ ತಯಾರಿಯನ್ನು ದಿಶಾನಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಬ್ಯುಸಿ ಆಗಿರುವ ದಿಶಾನಿ ತಮ್ಮ ಬೋಲ್ಡ್ ಮತ್ತು ಸುಂದರ ಲುಕ್ ನಿಂದಲೇ 81 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹೊಂದಿದ್ದಾರೆ. ಪ್ರತಿನಿತ್ಯವೂ ತಮ್ಮ ಥರಾವರಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ದಿಶಾನಿ ಈಗಾಗಲೇ ಬಾಲಿವುಡ್ ಗೆ ಎಂಟ್ರಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.