ಮಂಗಳೂರಿನ ನದಿಯಲ್ಲಿ ತೇಲಿಬಂದ ಯುವತಿ ಶವ- ಸಮುದ್ರಪಾಲಾಗುವುದನ್ನು ತಪ್ಪಿಸಿದ ಮೀನುಗಾರರು

ಮಂಗಳೂರು: ನೇತ್ರಾವತಿ ನದಿಯಲ್ಲಿ ತೇಲಿಬರುತ್ತಿದ್ದ ಯುವತಿಯ ಮೃತದೇಹವೊಂದು ಹೊಯ್ಗೆಬಜಾರ್‌ ಸಮೀಪ ಸಮುದ್ರದ ಸೇರುತ್ತಿರುವುದನ್ನು ತಪ್ಪಿಸಿರುವ ಮೀನುಗಾರರು, ಮೃತದೇಹವನ್ನು ದಡಕ್ಕೆ ತಂದು ಹಾಕಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಬೆಳ್ಳಂಬೆಳಗ್ಗೆ ಮೀನುಗಾರಿಕೆ ನಡೆಸಲೆಂದು ಸಮುದ್ರಕ್ಕೆ ತೆರಳುತ್ತಿದ್ದ ಸ್ಥಳೀಯ ಮೀನುಗಾರರು ನದಿಯಲ್ಲಿ ತೇಲಿಬರುತ್ತಿದ್ದ ಈ ಮೃತದೇಹವು ಸಮುದ್ರದ ಸೇರುತ್ತಿರುವುದನ್ನು ನೋಡಿದ್ದಾರೆ‌. ತಕ್ಷಣ ಮೃತದೇಹವನ್ನು ಮೇಲಕ್ಕೆತ್ತಿ ದಡಕ್ಕೆ ತಂದು ಹಾಕಿದ್ದಾರೆ. ಬಳಿಕ ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತದೇಹವನ್ನು ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಯುವತಿಯ ಗುರುತು ಪತ್ತೆ ಇನ್ನೂ ಆಗಿಲ್ಲ.

ಸುಮಾರು 5 ಅಡಿ ಎತ್ತರವಿರುವ ಯುವತಿಯು ಕಪ್ಪುಬಣ್ಣದ ಟೀಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.‌ ಒಂದು ಕೈಯಲ್ಲಿ ಕಪ್ಪಿನ ಬಳೆ ಮತ್ತು ಕೆಂಪು ದಾರವನ್ನು ಧರಿಸಿದ್ದಾರೆ. ಉದ್ದನೆಯ ಕೂದಲು ಇರುವ ಯುವತಿಯ ಮೃತದೇಹದ‌‌ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu