-->
Marvoor Bridge: ಕುಸಿದ ಸೇತುವೆ, ಉಡುಗಿರುವ ಜನರ ಧ್ವನಿ, ಬದಲಾಗಿರುವ ತೌಳವ ರಾಜಕಾರಣ

Marvoor Bridge: ಕುಸಿದ ಸೇತುವೆ, ಉಡುಗಿರುವ ಜನರ ಧ್ವನಿ, ಬದಲಾಗಿರುವ ತೌಳವ ರಾಜಕಾರಣ

ಬರಹ: ಮುನೀರ್ ಕಾಟಿಪಳ್ಳಮಂಗಳೂರಿನಲ್ಲಿ ಎರಡು ವರ್ಷದ ಅಂತರದಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮೂಲರ ಪಟ್ನ ಸೇತುವೆ ಕುಸಿದು ಆ ಭಾಗದಲ್ಲಿ ಮಂಗಳೂರು, ಬಂಟ್ವಾಳ ರಸ್ತೆ ಸಂಪರ್ಕ ಕಡಿದು ಹೋಗಿತ್ತು.

ಈಗ ಮಂಗಳೂರು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೇರವಾಗಿ ಸಂಪರ್ಕಿಸುವ ಪ್ರಧಾನ ರಸ್ತೆಯ ಮರವೂರು ಸೇತುವೆ ಬಿರುಕು ಬಿದ್ದು, ಸಂಚಾರ ಬಂದ್ ಆಗಿದೆ. ಇನ್ನೇನಿದ್ದರೂ ಹತ್ತಾರು ಕಿಲೋ ಮೀಟರ್ ಸುತ್ತು ಬಳಸಿ, ಟ್ರಾಫಿಕ್ ಜಾಮ್ ಗಳಲ್ಲಿ ಸಿಲುಕಿ ವಿಮಾನ ನಿಲ್ದಾಣ ತಲುಪಬೇಕು.


Muneer Katipalla 


ಮೂಲರಪಟ್ನ ಸೇತುವೆ ಕುಸಿದಾಗ ಮರಳು ದಂಧೆಕೋರರು ಎಗ್ಗಿಲ್ಲದೆ ನಡೆಸಿದ ಅಕ್ರಮ, ಅವೈಜ್ಞಾನಿಕ ಮರಳುಗಾರಿಕೆಯಿಂದಲೆ ಸೇತುವೆ ಕುಸಿಯಿತು ಎಂಬ ವ್ಯಾಪಕ ಆರೋಪ ಕೇಳಿ ಬಂದಿತ್ತು. ಅದು ನಿಜವೂ ಆಗಿತ್ತು. ಈಗ ಮರವೂರು ಸೇತುವೆ ಬಿರುಕು ಬಿಟ್ಟಾಗ ಮತ್ತದೇ ಮರಳು ದಂಧೆಯ ಕರಾಳ ರೂಪ ಚರ್ಚೆಗೆ ಬಂದಿದೆ. ಜನರು ಮರಳು ದಂಧೆಕೋರರು, ಜನಪ್ರತಿನಿಧಿಗಳು, ಆಳುವ ಪಕ್ಷದ ಸ್ಥಳೀಯ ಪ್ರಭಾವಿಗಳು, ಅಧಿಕಾರಿಗಳ ಅಪವಿತ್ರ ಮೈತ್ರಿಕೂಟದ ಕುರಿತು ದೂರುತ್ತಿದ್ದಾರೆ. ಜನರ ಈ ಆರೋಪ ತಕ್ಷಣದ ಸಿಟ್ಟಿನ ಪ್ರತಿಕ್ರಿಯೆ ಖಂಡಿತಾ ಅಲ್ಲ. ತುಳುನಾಡಿನ ಮರಳು ದಂಧೆಯ ಕರಾಮತ್ತುಗಳು ಇರುವುದೇ ಹಾಗೆ. ಆ ಕುರಿತು ನನ್ನ ಅನುಭವದ ಒಂದೆರಡು ಘಟನೆಗಳನ್ನು ಈ ಸಂದರ್ಭ ಉಲ್ಲೇಖಿಸಬಯುತ್ತೇನೆ.


ನಾಲ್ಕೈದು ವರ್ಷಗಳ ಹಿಂದೆ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಒಂದು ದೂರು ಡಿವೈಎಫ್ಐ ಕಚೇರಿಗೆ ಬಂದಿತ್ತು. ಇದೇ ಫಲ್ಗುಣಿ ನದಿಗೆ ಡ್ರೆಜ್ಜಿಂಗ್ ಯಂತ್ರ ಹಾಕಿ ಸಾವಿರಾರು ಲೋಡ್ ಮರಳು ತೆಗೆಯಲಾಗಿದೆ. ಅದನ್ನು ಅಧಿಕಾರಿಗಳ ಸಖ್ಯದಿಂದ ಕಂದಾವರ, ಸೂರಲ್ಪಾಡಿ ಸುತ್ತಮುತ್ತ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದಾಗಿತ್ತು.


ನಾವು ಆ ದೂರಿನಲ್ಲಿ ಸತ್ಯಾಂಶ ಇರುವುದನ್ನು ಖಾತರಿ ಪಡಿಸಿಕೊಂಡು ಅಂದಿನ ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರಿಗೆ ಈ ಕುರಿತು ದೂರು ನೀಡಿದೆವು. ತಕ್ಷಣ ಕಾರ್ಯಾಚರಣೆ ಕೈಗೊಂಡ ಕಮೀಷನರ್ ಚಂದ್ರಶೇಖರ್ ಸಾವಿರಾರು ಟನ್ ಅಕ್ರಮ ಮರಳು ದಾಸ್ತಾನನ್ನು ವಶಪಡಿಸಿದರು. ಇದಾಗಿ ಕೆಲವೇ ದಿನಗಳಲ್ಲಿ ಚಂದ್ರಶೇಖರ್ ತನ್ನದೇ ಆದ ಕಾರಣಗಳಿಗೆ ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡು ಹೋದರು.


ಆ ತಕ್ಷಣವೇ ವ್ಯವಸ್ಥಿತವಾಗಿ ಫೀಲ್ಡಿಗಿಳಿದ ಮರಳು ದಂಧೆಕೋರರು ಗಣಿ ಇಲಾಖೆಯ ಭ್ರಷ್ಟರ ಜೊತೆ ವ್ಯವಹಾರ ಕುದುರಿಸಿ ವಶಕ್ಕೆ ಪಡೆದಿದ್ದ ಮರಳನ್ನು ಹರಾಜು ನಡೆಸುವಂತೆ ಮಾಡಿದರು. ತಮ್ಮ ತೋಳ್ಬಲ, ರಾಜಕೀಯ ಬಲ, ಹಣ ಬಲವನ್ನು ಬಳಸಿ ಹರಾಜಿನಲ್ಲಿ ಆ ಮರಳಿನ ದಾಸ್ತಾನು ಇಟ್ಟಿದ್ದ ದಂಧೆ ಕೋರರ ಹೊರತುಪಡಿಸಿ ಒಬ್ಬನೇ ಒಬ್ಬ ಹರಾಜಿನಲ್ಲಿ ಭಾಗವಹಿಸದಂತೆ ನೋಡಿಕೊಂಡರು. ಅದರಿಂದ ಅಲ್ಲಿಯವರಗೆ ಅಕ್ರಮ ದಾಸ್ತಾನು ಆಗಿದ್ದ, ಕೋಟ್ಯಂತರ ರೂಪಾಯಿ ಮೌಲ್ಯದ ಆ ಸಾವಿರಾರು ಟನ್ ಮರಳು ತಕ್ಷಣವೇ ಸಕ್ರಮ ಮರಳಾಗಿ ಪರಿವರ್ತನೆಗೊಂಡಿತು. ದಂಧೆಕೋರರು ನಮ್ಮ ಮುಂದೆಯೇ ಮೀಸೆ ತಿರುವುತ್ತಾ ಮರಳನ್ನು ರಾಜಾರೋಷವಾಗಿ ಸಾಗಿಸಿದರು.


ಇದೇ ಸಂದರ್ಭದಲ್ಲಿ ಅಡ್ಯಾರ್ ಸಮೀಪದ ನೇತ್ರಾವತಿ ನದಿಯ ಮದ್ಯೆ ಇದ್ದ ಕುದ್ರು (ದ್ವೀಪ) ವಿನ ಸುತ್ತ ಅಕ್ರಮ ಮರಳು ಗಾರಿಕೆ ನಡೆಸಿ ಕುದ್ರು ಮುಳುಗುವಂತೆ ಮಾಡುತ್ತಿದ್ದಾರೆ ಎಂದು ಕುದ್ರುವಿನಲ್ಲಿ ವಾಸವಿದ್ದ ಕುಟುಂಬಗಳು ಡಿವೈಎಫ್ಐ ಸಂಘಟನೆಗೆ ದೂರು ನೀಡಿದ್ದವು. ಈ ಅಕ್ರಮವನ್ನು ಪ್ರಶ್ನಿಸಿದವರನ್ನು ದೈಹಿಕ ಹಲ್ಲೆಯ ಮೂಲಕವೇ ಬಾಯಿ ಮುಚ್ಚಿಸುತ್ತಿದ್ದ ಬಲಾಢ್ಯ ದಂಧೆಕೋರರ ಕುರಿತು ದ್ವೀಪವಾಸಿಗಳಿಗೆ ಅಪಾರ ಭಯ ಇತ್ತು. ಆದರೆ ಡಿವೈಎಫ್ಐ ಈ ಕುರಿತು ಪ್ರತಿಭಟನೆ ನಡೆಸಿ ಆಗ ಜಿಲ್ಲಾಧಿಕಾರಿಗಳಾಗಿದ್ದ ಎ ಬಿ ಇಬ್ರಾಹಿಂ ಅವರಿಗೆ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿತು. 


ತಕ್ಷಣ ಕಾರ್ಯಪ್ರವೃತ್ತರಾದ ಎ ಬಿ ಇಬ್ರಾಹಿಂ ಮರಳು ದಂಧೆಕೋರರ ಗೆಳೆಯರೇ ಆಗಿದ್ದ ಸ್ಥಳೀಯ ಪೊಲೀಸರ ಜೊತೆಗೆ ಆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು. ದಶಕಗಳಿಂದ ಯಾರೂ ಮುಟ್ಟದ ದಂಧೆಕೋರರ ಶೆಡ್ ಗಳನ್ನು ಧ್ವಂಸಗೊಳಿಸಿದರು. ಕುದ್ರುವಿನ ಸುತ್ತ ಒಂದು ಕಿ ಮೀ ಮರಳುಗಾರಿಕೆಗೆ ಕಟ್ಟುನಿಟ್ಟಿನ ನಿಷೇಧ ಹೇರಿದರು. ಇದರಿಂದ ದಂಧೆಕೋರರು ವಿಚಲಿತರಾದರೂ ಹಿಮ್ಮೆಟ್ಟದೆ ಇಬ್ರಾಹಿಂ ಅವರನ್ನು ಓಲೈಸಲು ನೋಡಿದರು. ಅವರು ಬಗ್ಗದಿದ್ದಾಗ ವಿಧಾನಸೌಧದವರಗೆ ಕೈ ಚಾಚಿ ನಿಷೇಧವನ್ನು ಅರ್ಧ ಕಿ ಮೀ ಗೆ ಇಳಿಸಿದರು. ಕ್ರಮೇಣ ತಮ್ಮ ರಾಜಕೀಯ ಪ್ರಭಾವದಿಂದ ಮತ್ತೆ ದಂಧೆಯನ್ನು ಹಿಂದಿನ ಸ್ಥಿತಿಗೇ ತಂದು ಕೊಂಡರು. ಇದೇ ಅಡ್ಯಾರ್ ಭಾಗದಲ್ಲಿ ಅಕ್ರಮ ಮರಳು ದಂಧೆಯ ವಿರುದ್ದ ಮೌನ ವಹಿಸಲು ಒಪ್ಪದೇ ಇದ್ದದ್ದಕ್ಕಾಗಿ ಗ್ರಾಮಸ್ಥರೋರ್ವರನ್ನು ಬಡಿದು ಕೊಂದು ಹಾಕಲಾಯಿತು.


ಕಳೆದ ಮಳೆಗಾಲಕ್ಕೆ ಸ್ವಲ್ಪ ಹಿಂದೆ ನಾನು ಇದೇ ಪಲ್ಗುಣಿ ನದಿ ತೀರದ ಕೆಲವು ಗ್ರಾಮಗಳಿಗೆ ಗೆಳೆಯರ ಜೊತೆಗೆ ಭೇಟಿ ನೀಡಿದ್ದೆ. ಆಗ ಅಲ್ಲಿನ ನದಿ ದಂಡೆಗಳನ್ನು ಕಾಣುವಂತಾಯಿತು. ಬೇಸಗೆಯಲ್ಲಿ ನೀರಿನ ಹರಿವು ತೀರಾ ಕಡಿಮೆ ಇದ್ದ ಪಲ್ಗುಣಿ ನದಿಯನ್ನು ಆ ಭಾಗದಲ್ಲಿ ದಂಧೆಕೋರರು ಅಕ್ಷರಶಃ ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದ್ದರು. 


ಜೆಸಿಬಿ, ಹಿಟಾಚಿಗಳು ನದಿ ಪಾತ್ರವನ್ನು ಹರಿದು ಚಿಂದಿ ಮಾಡಿದ್ದವು. ನದಿ ಗುರುತನ್ನೇ ಕಳೆದುಕೊಂಡಿತ್ತು. ಈಗ ಮೂರು ತಿಂಗಳ ಈಚೆಗೆ ಮೂಲ್ಕಿ ಸಮೀಪದ ಶಾಂಭವಿ ನದಿಯ ತೀರದ ಗ್ರಾಮಗಳಿಗೆ ಹೋಗಿದ್ದೆ. ವಾಹನಗಳ ಓಡಾಟ ಅತಿ ಕಡಿಮೆ ಇರುವ ಆ ಪ್ರದೇಶದಲ್ಲಿ ರಸ್ತೆಗಳು ಪೂರ್ಣ ಹದಗೆಟ್ಟದ್ದು ಕಂಡು ಅಚ್ಚರಿಯಾಯಿತು. ಮುಂದಕ್ಕೆ ನದಿ ತೀರದ ಗೆಳೆಯರ ಜೊತೆ ಮಾತಾಡುವಾಗ ತಿಳಿದದ್ದೇನೆಂದರೆ, ಮೊದಲು ಒಂದು ದಕ್ಕೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿದ್ದಲ್ಲಿ ಈಗ ಮೂರು ದಕ್ಕೆಗಳು ನಿರ್ಮಾಣಗೊಂಡಿವೆ. 


ಯಾವ ನಿಯಮಗಳನ್ನೂ ಪಾಲಿಸದೆ, ಯಂತ್ರಗಳನ್ನೂ ಬಳಸಿ ಇಲ್ಲಿ ಆಡಳಿತ ಪಕ್ಷದ ಪ್ರಭಾವಿಗಳ ಆಶ್ರಯದಲ್ಲಿ ಹಗಲು ರಾತ್ರಿ ಮರಳುಗಾರಿಕೆ ನಡೆಯುತ್ತಿದೆ. ಯಾವ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನ ಇಲ್ಲ. ದೂರು ನೀಡಿದವರ ವಿವರ ದಂಧೆಕೋರರಿಗೆ ತಲುಪುತ್ತದೆ. ಇದರಿಂದ ಬೇಸತ್ತು ಕೆಲವು ಯುವಕರು ದಂಧೆಕೋರರಲ್ಲಿ ತಮ್ಮ ಪಾಲು ಪಡೆದು ಸುಮ್ಮನಾಗಿದ್ದಾರೆ. ರಸ್ತೆಗಳೂ ಛಿದ್ರಗೊಂಡಿವೆ. ನದಿ ಪಾತ್ರಗಳು ಆಳಗೊಳ್ಳುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದರು.


ಇದು ಈಗ ಒಂದೆರೆಡು ಘಟನೆಗಳಾಗಿ ಉಳಿದಿಲ್ಲ. ಕಳೆದ ಮೂರು ವರ್ಷಗಳಲ್ಲಂತೂ ಅಕ್ರಮ ಮರಳು ದಂಧೆಯ ವಿರಾಟ್ ರೂಪ ಪ್ರದರ್ಶನಗೊಳ್ಳುತ್ತಲೇ ಇದೆ. ಆದೇ ಸಂದರ್ಭ ಗ್ರಾಮೀಣ ಭಾಗದಲ್ಲಿ ಪ್ರತಿಭಟನೆಯ ಧ್ವನಿ ಸಂಪೂರ್ಣ ಉಡುಗಿ ಹೋಗಿದೆ. ಒಂದೆ ಒಂದು ದೂರುಗಳೂ ಈಗ ಹೊರಬುತ್ತಿಲ್ಲ. ಹಿಂದೆ ಹೀಗಿರಲಿಲ್ಲ. ಈಗ ಸೇತುವೆ ಕುಸಿದು ಸುದ್ದಿಯಲ್ಲಿರುವ ಮರವೂರು ನದಿದಂಡೆಯಲ್ಲೂ ಅಕ್ರಮ ಮರಳುಗಾರಿಕೆ, ಹಿಟಾಚಿ, ಡ್ರೆಜ್ಜಿಂಗ್ ಯಂತ್ರದ ಬಳಕೆಯ ಕುರಿತು ವರ್ಷಗಳಿಂದ ಗ್ರಾಮಸ್ಥರು ಆಕ್ಷೇಪ ಎತ್ತುತ್ತಲೇ ಬಂದಿದ್ದರು. ಸೇತುವೆ ಕುಸಿಯಲಿದೆ ಎಂದು ಬೊಬ್ಬೆಯನ್ನೂ ಹೊಡೆಯುತ್ತಿದ್ದರು. ಆದರೆ ಅವರ ದ್ವನಿಯನ್ನು ಹತ್ತಿಕ್ಕಲಾಯಿತು. ಈಗಂತೂ ಹೊಸ ಸೇತುವೆಯ ಪ್ರಭಾವಿ ಗುತ್ತಿಗೆದಾರ, ಅಧಿಕಾರಸ್ಥ ರಾಜಕಾರಣಿಗಳ "ಎಟಿಎಮ್" ಎಂದು ಖ್ಯಾತರಾದ ವ್ಯಕ್ತಿ ಯಂತ್ರಗಳ ಮೂಲಕ ನಡೆಸಿದ ಮರಳು ದಂಧೆ ಅಂತಿಮವಾಗಿ ಸೇತುವೆಯ ಪಿಲ್ಲರ್ ಗಳನ್ನು ಅಲ್ಲಾಡಿಸಿದೆ. ಆಗಿನಿಂದ ಸತತವಾಗಿ ಸೇತುವೆಯ ಸಮೀಪ ನಡೆದ ಅಕ್ರಮ ಮರಳು ಗಾರಿಕೆಯ ದಂಧೆಯೇ ಇಂದು ವಿಮಾನ ನಿಲ್ದಾಣಕ್ಕೂ ಮಂಗಳೂರು ನಗರಕ್ಕೂ ನೇರ ಸಂಪರ್ಕ ಇಲ್ಲದಂತೆ ಮಾಡಿದೆ.


ಹೀಗೆಲ್ಲಾ ಯಾಕಾಗುತ್ತಿದೆ, ಪ್ರತಿರೋಧಗಳು ಕ್ಷೀಣವಾಗಿಯೂ ಯಾಕಿಲ್ಲ ಎಂದು ಸ್ವಲ್ಪ ಸಾವಧಾನದಿಂದ ಆಲೋಚಿಸಿದರೆ ಕಾರಣಗಳು ಎದ್ದು ಕಾಣುತ್ತವೆ. ಕಳೆದ ಎರಡು ದಶಕದಿಂದ ಈಚೆಗೆ ತಳುನಾಡಿನಲ್ಲಿ ತೀವ್ರಗೊಂಡ ಹಿಂದು, ಮುಸ್ಲಿಂ ಸಂಘರ್ಷದ ರಾಜಕಾರಣ, ಅದರ ಮರೆಯಲ್ಲಿ ಯಾರ ಅರಿವೂಗೂ ನಿಲುಕದೆ ನಡೆದ ಆರ್ಥಿಕ ಪಲ್ಲಟಗಳು, ಸಾಮಾಜಿಕ ಏರುಪೇರುಗಳು, ನೀತಿಗಳು, ಸಾಮೂಹಿಕವಾಗಿ ಭ್ರಷ್ಟಗೊಂಡ ಜನಮಾನಸಿಕತೆ ಇಂದು ಸೇತುವೆಗಳು ಕುಸಿಯುವ ಮೂಲಕ ರೂಪಕದಂತೆ ಎದ್ದು ನಿಂತಿವೆ. ಹಿಂದೆ ತುಳುನಾಡಿನ ಹಳ್ಳಿಗಳಲ್ಲಿ ಹೀಗಿರಲಿಲ್ಲ. ಎಲ್ಲಾ ಗ್ರಾಮಗಳಲ್ಲಿ ರಾಜಕೀಯವಾಗಿ ಕನಿಷ್ಟ ಎರಡು ಗುಂಪುಗಳಿರುತ್ತಿತ್ತು. ಅದಲ್ಲದೆ ಸಾಮಾಜಿಕ ಸಂಘಟನೆಗಳೂ ಸಕ್ರಿಯವಾಗಿದ್ದವು. ಇವು ಒಂದಿಷ್ಟು ಸಮತೋಲನ ಕಾಯುವಲ್ಲಿ, ಅಕ್ರಮಗಳಿಗೆ ಕಡಿವಾಣ ತೊಡಿಸುವಲ್ಲಿ ನೆರವಾಗುತ್ತಿದ್ದವು. ಮೊದಲು ಎಡಪಂಥೀಯ, ಜನಪರ ಸಂಘಟನೆಗಳನ್ನು ಜನರ ನಡುವಿನಿಂದ ಹೊರಗಟ್ಟಲು ಪಟ್ಟಭದ್ರ ಶಕ್ತಿಗಳು ಯಶಸ್ವಿಯಾದವು. ಕಳೆದು ಮೂರು ವರ್ಷಗಳಿಂದ ವಿರೋಧಿ ರಾಜಕೀಯ ಪಕ್ಷಗಳ ಧ್ವನಿಯನ್ನೂ ಹತ್ತಿಕ್ಕಲಾಯಿತು. ಈಗ ಏನಿದ್ದರೂ ಸ್ಥಳೀಯವಾಗಿ ಆಳುವ ಪಕ್ಷಗಳದ್ದೇ ಏಕಚಕ್ರಾಧಿಪತ್ಯ. ಅವರ ತೋಳ್ಬಲ, ರಾಜಕೀಯ ಬಲಗಳದ್ದೇ ಕರಾಮತ್ತು. ವಿರೋಧ ಪಕ್ಷಗಳ ಅಳಿದುಳಿದ ಕಾರ್ಯಕರ್ತರು ಭಯದಿಂದಲೂ, ಒಂದಿಷ್ಟು ಪಾಲು ತಮಗೂ ದೊರಕಲಿ ಎಂಬ ದುರಾಸೆಯಿಂದಲೂ ಮೌನಕ್ಕೆ ಶರಣಾಗಿದ್ದಾರೆ. ಇದರ ಪರಿಣಾಮಗಳು ಅಕ್ರಮ ಮರಳು ದಂಧೆ, ಜುಗಾರಿ, ಬಡ್ಡಿ ಮಾಫಿಯಾಗಳ ಗೂಂಡಾಗಿರಿ, ಗುತ್ತಿಗೆ ರಾಜಕಾರಣ, ಸೇತುವೆ ಕುಸಿತಗಳ ಮೂಲಕ ಅನಾವರಣಗೊಳ್ಳತೊಡಗಿದೆ‌. ಜನರಿಗೆ ನಿಧಾನವಾಗಿ ಉಸಿರುಗಟ್ಟತೊಡಗಿದೆ. ಆಮ್ಲಜನಕವನ್ನು ಹರಿಸುವವರು ಯಾರು ? ಕುಸಿಯಲು ಸಿದ್ದವಾಗಿರುವ ಮತ್ತಷ್ಟು ಸೇತುವೆಗಳು ನಮ್ಮ ಕಣ್ಣ ಮುಂದಿವೆ.

Ads on article

Advertise in articles 1

advertising articles 2

Advertise under the article