Raitha Sangha demands package | ಪಾಳು ಭೂಮಿಯಲ್ಲಿ ಕೃಷಿ ಕಾರ್ಯ: ಕರಾವಳಿ ಪ್ಯಾಕೇಜ್‌ಗೆ ರೈತ ಸಂಘ ಒತ್ತಾಯ





ಮಂಗಳೂರು: ಹಡೀಲು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರ ನಡೆಯನ್ನು ಸ್ವಾಗತಿಸಿರುವ ರೈತ ಸಂಘ ಹಸಿರುಸೇನೆ, ಭತ್ತಕ್ಕೆ ಈ ಹಿಂದೆ ಘೋಷಿಸಿರುವ ಕರಾವಳಿ ಪ್ಯಾಕೇಜ್ ದೊರಕಿಸುವಂತೆ ಆಗ್ರಹಿಸಿದೆ.



ಕಾರ್ಮಿಕರ ಸಮಸ್ಯೆ, ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಇತ್ಯಾದಿ ಸಮಸ್ಯೆಗಳಿಂದ ಕರಾವಳಿ ಭಾಗದಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಭತ್ತ ಬೆಳೆಗಾರರನ್ನು ಪ್ರೋತ್ಸಾಹಿಸಲು ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಭತ್ತಕ್ಕೆ ಕರಾವಳಿ ಪ್ಯಾಕೇಜ್ ಘೋಷಿಸಲಾಗಿತ್ತು. ಆದರೆ ಕಳೆದ ಈ ಪ್ಯಾಕೇಜ್ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ರೈತ ಸಂಘ ಹಸಿರುಸೇನೆಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ತಿಳಿಸಿದ್ದಾರೆ. 


ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿನವರು ಹಡೀಲು ಗದ್ದೆಯಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದರು. ಆದರೆ ಭತ್ತ ಕಟಾವಿಗೆ ಬಂದ ಸಮಯದಲ್ಲಿ ಕೆಲವು ಕಡೆ ಮಳೆ ಸುರಿದು ಬೆಳೆ ಹಾನಿಯಾಗಿತ್ತು. 



ಜತೆಗೆ ಖರೀದಿದಾರರು ಕಡಿಮೆ ಬೆಲೆಗೆ ಖರೀದಿ ಮಾಡಿದ್ದರಿಂದ ಕೆಲವು ರೈತರಿಗೆ ನಷ್ಟವುಂಟಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಸರ್ಕಾರವೇ ಭತ್ತವನ್ನು ಬೆಳೆಗಾರರಿಂದ ನೇರವಾಗಿ ಉತ್ತಮ ಬೆಲೆಗೆ ಖರೀದಿಸಬೇಕು. ಜತೆಗೆ ಬೈಹುಲ್ಲನ್ನೂ ಸರ್ಕಾರ ಖರೀದಿಸಿ ಗೋಶಾಲೆಗಳಿಗೆ ಪೂರೈಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.