ಬೆಡ್ ಬ್ಲಾಕ್ ಹಗರಣದಲ್ಲಿ ಬಿಜೆಪಿ ನಾಯಕರೇ ಪ್ರಮುಖ ಪಾತ್ರಧಾರಿಗಳು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಸಂಸದ ತೇಜಸ್ವೀ ಸೂರ್ಯ ಕಪಟ ನಾಟಕ ಸೂತ್ರಧಾರ ಎಂದು ಆರೋಪಿಸಿದರು.
ತಮ್ಮ ಬೆಂಬಲಿಗರನ್ನು ಅಲ್ಲಿ ತಂದು ಕೂರಿಸಬೇಕು ಎಂದು ಈ ರೀತಿಯ ಹೇಯ ಆಪಾದನೆ ಮಾಡಿದ್ದಾರೆ. ಪುಡಿರೌಡಿಗಳ ರೀತಿ ಇವರ ಬೆಂಬಲಿಗರು ವೀಡಿಯೋ ಮಾಡಿದ್ಧಾರೆ ಎಂದು ದೂರಿದರು.
ತೇಜಸ್ವಿ ಸೂರ್ಯ ಸಂಸದರಾಗಲು ನಾಲಾಯಕ್. ಸೂರ್ಯ ಮಾಡಿದ ಕೆಲಸ ಪ್ರತಿಯೊಬ್ಬ ರಾಜಕಾರಣಿಗೂ ಅವಮಾನ ಮಾಡಿದಂತಾಗಿದೆ. ಇವರ ಎಲ್ಲ ಕೃತ್ಯಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ, ತೇಜಸ್ವಿ ಸೂರ್ಯ ವಿರುದ್ಧ ತೀಕ್ಷ್ಣ ಟೀಕಾಪ್ರಹಾರ ಮಾಡಿದ ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ, ಬಿಜೆಪಿ ಗೂಂಡಗಳನ್ನು ಕೋವಿಡ್ ವಾರ್ ರೂಮ್‌ನಲ್ಲಿ ನೇಮಿಸಲು ಈ ರೀತಿಯ ನಾಟಕವಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಅಧಿಕಾರಿಗಳನ್ನು ಹೈಜಾಕ್ ಮಾಡಲು ಯತ್ನಿಸಿದರು. ಸಂಸದ ತೇಜಸ್ವಿ ಸೂರ್ಯ ಹಿಂಬಾಲಕರೇ ಬೆಡ್ ಹಂಚಿಕೆ ಮಾಡುತ್ತಿದ್ದರು. ಆಗ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.. ವಾರ್ ರೂಂನಲ್ಲಿ ಇರುವ ಮುಸ್ಲಿಂ ಸಿಬ್ಬಂದಿಯನ್ನು ತೆಗೆದುಹಾಕಬೇಕು ಎಂದು ಬಿಜೆಪಿ ಸಾಸಕರು ಒತ್ತಡ ಹಾಕಿದರು. ಈಗ ಇದರಲ್ಲಿ ಮುಸ್ಲಿಂ ಸಿಬ್ಬಂದಿ ತಪ್ಪಿಲ್ಲ ಎಂದು ಸಾಬೀತಾಗಿದೆ ಎಂದು ಅವರು ಹೇಳಿದರು.

